ಸಿರುಗುಪ್ಪ | ಚಿಂದಿ ಆಯುವವರಿಗೆ ಪಿಪಿಇ ಕಿಟ್ ವಿತರಣೆ
ತೆಕ್ಕಲಕೋಟೆಯಲ್ಲಿ ನಮಸ್ತೆ ದಿನಾಚರಣೆ ಅರ್ಥಪೂರ್ಣ ಆಚರಣೆ
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ನಮಸ್ತೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಂಗಡಣೆ ಕಾರ್ಯದಲ್ಲಿ ತೊಡಗಿರುವ ಚಿಂದಿ ಆಯುವವರಿಗೆ ವೈಯಕ್ತಿಕ ಸುರಕ್ಷತಾ ಉಪಕರಣಗಳಾದ (ಪಿಪಿಇ) ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ್ ಮಾತನಾಡಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಚಿಂದಿ ಆಯುವವರು ನಗರದ ನೈರ್ಮಲ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತ್ಯಾಜ್ಯ ಸಂಗ್ರಹಿಸುವ ವೇಳೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಕೈಗವಸು, ಮಾಸ್ಕ್, ಬೂಟು ಸೇರಿದಂತೆ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಸ್ವಚ್ಛತೆ ಮತ್ತು ಸುರಕ್ಷತೆಗೆ ಸಮಾನ ಆದ್ಯತೆ ನೀಡುವುದು ಅಗತ್ಯವಾಗಿದ್ದು, ಪ್ರತಿಯೊಬ್ಬ ಸ್ವಚ್ಛತಾ ಕಾರ್ಯಕರ್ತರೂ ಪಿಪಿಇ ಕಿಟ್‌ಗಳನ್ನು ದೈನಂದಿನ ಕಾರ್ಯದ ವೇಳೆ ಬಳಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಎಒ ಗಾದಿಲಿಂಗನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ಅನ್ನಪೂರ್ಣ, ನೈರ್ಮಲ್ಯ ಮೇಸ್ತ್ರಿ ಹಸನ್ ಸಬ್, ಕಮ್ಯುನಿಟಿ ಮೊಬೈಲೈಜರ್ ರೇಷ್ಮಾ, ಹುಲಿಗೆಮ್ಮ, ಪೌರಕಾರ್ಮಿಕರು ಹಾಗೂ ಚಿಂದಿ ಆಯುವವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಸುರಕ್ಷಿತ ತ್ಯಾಜ್ಯ ನಿರ್ವಹಣೆ, ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ ರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು. ಬಳಿಕ ಚಿಂದಿ ಆಯುವವರಿಗೆ ಪಿಪಿಇ ಕಿಟ್‌ಗಳನ್ನು ವಿತರಿಸಿ, ಅವುಗಳನ್ನು ಕಡ್ಡಾಯವಾಗಿ ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದರು. ಈ ಕಾರ್ಯಕ್ರಮವು ಸ್ವಚ್ಛತಾ ಕಾರ್ಯಕರ್ತರ ಆರೋಗ್ಯ ಮತ್ತು ಗೌರವಕ್ಕೆ ಪಟ್ಟಣ ಪಂಚಾಯಿತಿ ನೀಡುತ್ತಿರುವ ಆದ್ಯತೆಯನ್ನು ಪ್ರತಿಬಿಂಬಿಸಿತು.