ಸಿರುಗುಪ್ಪ | ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧ ಜಲ ಅಭಿಯಾನ
ಸಿರುಗುಪ್ಪ: ತಾಲ್ಲೂಕಿನ ಮುದ್ದಟನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವತಿಯಿಂದ ಇತ್ತೀಚೆಗೆ 'ಶುದ್ಧ ಜಲ ಅಭಿಯಾನ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಲೆಯ ಸಹಶಿಕ್ಷಕ ಉಮೇಶ ಅವರು, ಮಾನವ ಜೀವನಕ್ಕೆ ಅವಶ್ಯವಿರುವ ಪಂಚಭೂತಗಳಲ್ಲಿ ನೀರು ಅತ್ಯಂತ ಪ್ರಮುಖವಾದುದು. ನೀರಿಲ್ಲದೆ ಜೀವನ ಅಸಾಧ್ಯ. ಪ್ರಕೃತಿ ನಮಗೆ ನೀಡಿರುವ ಈ ಅಮೂಲ್ಯ ಸಂಪತ್ತನ್ನು ನಾವು ಯೋಗ್ಯ ರೀತಿಯಲ್ಲಿ ಬಳಸಬೇಕು. ಎಲ್ಲೂ ನೀರನ್ನು ವ್ಯರ್ಥ ಮಾಡದೆ ಹಿತಮಿತವಾಗಿ ಬಳಸುವುದನ್ನು ವಿದ್ಯಾರ್ಥಿಗಳು ಇಂದಿನಿಂದಲೇ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಲೆಯ ಸಹಶಿಕ್ಷಕ ಮುದುಕಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಮಹಮ್ಮದ್ ರಫಿ ಅತಿಥಿಗಳನ್ನು ಸ್ವಾಗತಿಸಿದರು. ಈ ಜಲ ಜಾಗೃತಿ ಅಭಿಯಾನದಲ್ಲಿ ಶಾಲೆಯ ಶಿಕ್ಷಕ ವೃಂದ, ಧರ್ಮಸ್ಥಳ ಯೋಜನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.