ಬಳ್ಳಾರಿ ಗುಂಪು ಘರ್ಷಣೆ | ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರಕಾರ
ಬೆಂಗಳೂರು, ಜ.10: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗುಂಪು ಘರ್ಷಣೆ ಹಾಗೂ ಗುಂಡಿನ ದಾಳಿ ವೇಳೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟ ಪ್ರಕರಣದ ಹೆಚ್ಚಿನ ತನಿಖೆಗಾಗಿ ರಾಜ್ಯ ಸರಕಾರವು ಸಿಐಡಿಗೆ ವರ್ಗಾವಣೆ ಮಾಡಿದೆ.
ಈ ಪ್ರಕರಣದ ಕಾವು ಹೆಚ್ಚಾಗಿ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಯಾದ ಬೆನ್ನಲ್ಲೇ ತನಿಖೆಯನ್ನು ಸಿಐಡಿಗೆ ವಹಿಸುವ ಮೂಲಕ ರಾಜ್ಯ ಸರಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣವನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
25 ಆರೋಪಿಗಳಿಗೆ ಜಾಮೀನು :
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗುಂಪು ಘರ್ಷಣೆ ಹಾಗೂ ಗುಂಡಿನ ದಾಳಿ ಪ್ರಕರಣದಲ್ಲಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಹೊರತುಪಡಿಸಿ ಉಳಿದ 25 ಆರೋಪಿಗಳಿಗೆ ಶುಕ್ರವಾರ(ಜ.9) ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಈ ಪ್ರಕರಣದಲ್ಲಿ ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಲ್ಲಿ 6 ಪ್ರಕರಣ ದಾಖಲಾಗಿವೆ. ಗನ್‌ಮ್ಯಾನ್‌ಗಳಾದ ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಸೇರಿದಂತೆ ಕಾಂಗ್ರೆಸ್‌ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಕ್ರೈಂ ಸಂಖ್ಯೆ 4ರಲ್ಲಿನ 25 ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಮುಖ ಆರೋಪಿ ಖಾಸಗಿ ಗನ್‌ಮ್ಯಾನ್ ಗುರುಚರಣ್ ಸಿಂಗ್‌ಗೆ ಸಂಬಂಧಿಸಿದ ಗನ್‌ನಿಂದಲೇ 12 ಎಂಎ ಬುಲೆಟ್ ಫೈರ್ ಆಗಿರುವ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯವು ಜಾಮೀನು ನೀಡಿಲ್ಲ ಎಂದು ತಿಳಿದು ಬಂದಿದೆ.