ಬಳ್ಳಾರಿಯಲ್ಲಿ ಬೆಂಬಲ ಯೋಜನೆಯಡಿ ಸೂರ್ಯಕಾಂತಿ, ಶೇಂಗಾ ಉತ್ಪನ್ನ ಖರೀದಿ ಪ್ರಾರಂಭ : ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್
ಬಳ್ಳಾರಿ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ 2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿ ಮತ್ತು ಶೇಂಗಾ ಉತ್ಪನ್ನಗಳನ್ನು ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದರು. ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನಕ್ಕೆ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ 7,721ರೂ. ಮತ್ತು ಶೇಂಗಾ ಉತ್ಪನ್ನಕ್ಕೆ 7,263 ರೂ. ರಂತೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಸೂರ್ಯಕಾಂತಿ ಖರೀದಿ ಕೇಂದ್ರವನ್ನು ಬಳ್ಳಾರಿ ಎಪಿಎಂಸಿ ಯಾರ್ಡ್‌ನ ಎಪಿಎಂಸಿ ಆಡಳಿತ ಕಚೇರಿಯಲ್ಲಿ ತೆರೆಯಲಾಗಿದೆ, ಶೇಂಗಾ ಖರೀದಿ ಕೇಂದ್ರಗಳು ಬಳ್ಳಾರಿ ಎಪಿಎಂಸಿ ಕಚೇರಿ ಹಾಗೂ ಸಂಡೂರು ಪಟ್ಟಣದ ವಿಜಯ ವೃತ್ತದಲ್ಲಿರುವ ರೈತರ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಖರೀದಿ ಏಜೆನ್ಸಿಯಾಗಿ ಕರ್ನಾಟಕ ಸಹಕಾರ ಎಣ್ಣೇ ಬೀಜ ಬೆಳೆಗಾರರ ಮಾರಾಟ ಮಹಾ ಮಂಡಳಿ, ಬಳ್ಳಾರಿ ಶಾಖೆ ನಿಗದಿಯಾಗಿದ್ದು, ರೈತರು ನೇರವಾಗಿ ಕೇಂದ್ರಕ್ಕೆ ಉತ್ಪನ್ನ ತಂದು ಕೊಡುವ ಮೂಲಕ ಬೆಂಬಲ ಬೆಲೆ ಪಡೆಯಬಹುದಾಗಿದೆ.
ರೈತರು 2025–26ನೇ ಸಾಲಿನ ಪಹಣಿ ಪತ್ರ, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿತ FID, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಪುಸ್ತಕದ ನಕಲು ಸಹಿತ ಒಣಗಿದ ಹಾಗೂ ಎಫ್‌ಎಕ್ಯೂ ಗುಣಮಟ್ಟದ ಉತ್ಪನ್ನವನ್ನು ಖರೀದಿ ಕೇಂದ್ರಗಳಿಗೆ ತರಬೇಕು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೃಷಿ ಇಲಾಖೆಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬೇಕು.
ಖರೀದಿ ಪ್ರಕ್ರಿಯೆ ಕಚೇರಿ ಕಾರ್ಯಾವಧಿಯಲ್ಲಿಯೇ ನಡೆಯಲಿದೆ ಮತ್ತು ಮಧ್ಯವರ್ತಿಗಳೊಂದಿಗೆ ವ್ಯಾಪಾರ ಮಾಡುವುದಕ್ಕೆ ಅವಕಾಶವಿಲ್ಲ. ನಿಗದಿತ ಅವಧಿಯೊಳಗೆ ನೋಂದಣಿಗೊಂಡ ರೈತರಿಂದ ಸೂರ್ಯಕಾಂತಿಗೆ ಪ್ರತಿ ಎಕರೆಗೆ 4 ಕ್ವಿಂಟಾಲ್ ಗರಿಷ್ಠ 20 ಕ್ವಿಂಟಾಲ್, ಶೇಂಗಾಗೆ ಪ್ರತಿ ಎಕರೆಗೆ 3 ಕ್ವಿಂಟಾಲ್ ಗರಿಷ್ಠ 15 ಕ್ವಿಂಟಾಲ್ ಉತ್ಪನ್ನವನ್ನು ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.