ಬಳ್ಳಾರಿ: ಮೂವರು ಮಕ್ಕಳ ಜೊತೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ
Update: 2025-06-18 22:56 IST
ಬಳ್ಳಾರಿ: ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳ ಜೊತೆ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಬರದನಹಳ್ಳಿಯಲ್ಲಿ ನಡೆದಿದೆ. ಬೆಳಗಾವಿ ಮೂಲದ ಮಹಿಳೆ ಸಿದ್ದಮ್ಮ(30) ಮಕ್ಕಳಾದ ಅಭಿಗ್ನ(8), ಅವಣಿ(6), ಆರ್ಯ(4) ಮೃತಪಟ್ಟವರು.
ಸಿದ್ದಮ್ಮ ತನ್ನ ಮಕ್ಕಳನ್ನು ಮೊದಲು ಕೃಷಿ ಹೊಂಡಕ್ಕೆ ತಳ್ಳಿ ಬಳಿಕ ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಮೂಲದ ಸಿದ್ದಮ್ಮ ಹಾಗೂ ಪತಿ ಕುಮಾರ್ ತಮ್ಮ ಮೂವರು ಮಕ್ಕಳೊಂದಿಗೆ ಕುರಿ ಮೇಯಿಸಲು ಬಳ್ಳಾರಿಗೆ ಬಂದಿದ್ದು, ಕುರುಗೋಡು ತಾಲೂಕಿನ ಬರದನಹಳ್ಳಿಯ ರಾಘವೇಂದ್ರ ಎಂಬವರ ಜಮೀನಿನಲ್ಲಿ ಕುರಿ ಹಟ್ಟಿ ಹಾಕಿದ್ದರು.
ಮಂಗಳವಾರ ಸಿದ್ದಮ್ಮ ಹಾಗೂ ಪತಿ ಕುಮಾರ್ ನಡುವೆ ಜಗಳ ನಡೆದಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ಸಿದ್ದಮ್ಮ ಅವರ ಸಹೋದರ ನೀಡಿದ ದೂರಿನನ್ವಯ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.