×
Ad

ದಸರಾ ಯುವ ಸಂಭ್ರಮಕ್ಕೆ ಅದ್ದೂರಿ ಚಾಲನೆ

Update: 2025-09-10 23:22 IST

ಮೈಸೂರು, ಸೆ.10: ನಾಡಹಬ್ಬ ದಸರಾ ಸಂಭ್ರಮಕ್ಕೆ ದಿನಗಣನೆ ಶುರುವಾದ ಬೆನ್ನಲ್ಲೇ ಬುಧವಾರ ಗಂಗೋತ್ರಿ ಆವರಣದಲ್ಲಿ ಯುವ ಸಂಭ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 7 ದಿನಗಳ ಕಾಲ ನಡೆಯುವ ಮೈಸೂರು ದಸರಾ ಮಹೋತ್ಸವ -2025ರ ಯುವ ಸಂಭ್ರಮಕ್ಕೆ ನಟ ಯುವರಾಜ್‌ಕುಮಾರ್, ನಟಿ ಅಮೃತ್ ಅಯ್ಯಂಗಾರ್, ಸಚಿವ ಕೆ.ವೆಂಕಟೇಶ್ ಸಹಿತ ಅನೇಕ ಗಣ್ಯರು ಚಾಲನೆ ನೀಡಿದರು.

ನಟ ಯುವರಾಜ್ ಮಾತನಾಡಿ, ಈ ವೇದಿಕೆ ನಿಮ್ಮದಾಗಿದ್ದು ದಸರಾ ಆರಂಭ ಆಗುತ್ತಿರುವುದೇ ನಿಮ್ಮಿಂದ, ನಿಮ್ಮಲ್ಲಿರುವ ಪ್ರತಿಭೆಗಳಿಂದ ಎಂದು ಸಂತಸ ಹಂಚಿಕೊಂಡರು. ಜತೆಗೆ ನರ್ತಿಸಿ ಯುವ ಮನಸ್ಸುಗಳು ಸಂಭ್ರಮಿಸುವಂತೆ ಮಾಡಿದರು.

ನಟಿ ಅಮೃತ ಅಯ್ಯರ್ ಮಾತನಾಡಿ, ನಮ್ಮೂರಲ್ಲಿ ನಮ್ಮ ವೇದಿಕೆಯಲ್ಲಿ ಭಾಗವಹಿಸಿರುವುದು ಸಂತೋಷವಾಗುತ್ತಿದೆ. ನಾನು ಕೂಡ ಕಾಲೇಜಿನ ದಿನಗಳಲ್ಲಿ ಯುವ ಸಂಭ್ರಮ ನೋಡಲು ಬರುತ್ತಿದ್ದುದು ನೆನಪಾಗುತ್ತಿದೆ ಎಂದು ಹೇಳಿದರು.

ಸಚಿವ ಕೆ.ವೆಂಕಟೇಶ್ ಮಾತನಾಡಿ, ಯುವ ದಸರಾವನ್ನು ಎಲ್ಲ ಸರಕಾರವೂ ನಡೆಸಿಕೊಂಡು ಬಂದಿದ್ದು, ಅದರಂತೆ ಕಾಂಗ್ರೆಸ್ ಸರಕಾರ ಅದ್ದೂರಿಯಾಗಿ ಚಾಲನೆ ನೀಡಿದೆ ಎಂದರು.

ಶಾಸಕ ಜಿ.ಟಿ.ದೇವೆಗೌಡ ಮಾತನಾಡಿ, ಕಾರ್ಯಕ್ರಮಕ್ಕೆ ಹೊರ ರಾಜ್ಯದಿಂದ ಬಂದವರಿಗೆ ಯಾವುದೇ ಸಮಸ್ಯೆ ಆಗಬಾರದು. ಎಲ್ಲರೂ ಸೌಜನ್ಯದಿಂದ ವರ್ತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಬಳಿಕ ಮೊದಲ ದಿನ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು ನಡೆದವು.

ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಜಿಲ್ಲಾಧಿಕಾರಿ ಡಾ.ಲಕ್ಷ್ಮೀಕಾಂತ ರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News