×
Ad

Bengaluru | ಕತ್ತು ಕೊಯ್ದು ಸ್ಟಾಫ್‌ ನರ್ಸ್ ಹತ್ಯೆ; ಆರೋಪಿಯ ಬಂಧನ

Update: 2025-12-26 19:43 IST

ಸಾಂದರ್ಭಿಕ ಚಿತ್ರ | Photo Credit : freepik

ಬೆಂಗಳೂರು : ಮಹಿಳೆಯೊಬ್ಬರ ಕತ್ತು ಕೊಯ್ದು ಹತ್ಯೆಗೈದ ಪ್ರಕರಣ ಸಂಬಂಧ ಆರೋಪಿಯನ್ನು ಇಲ್ಲಿನ ಕೆ.ಎಸ್.ಲೇಔಟ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬೆಂಗಳೂರಿನ ಕೆ.ಎಸ್.ಲೇಔಟ್‍ನ ಪ್ರಗತಿಪುರದಲ್ಲಿನ ಮನೆಯಲ್ಲಿ ಡಿಸೆಂಬರ್ 24ರಂದು ರಾತ್ರಿ ಘಟನೆ ನಡೆದಿದ್ದು, ಚಿತ್ರದುರ್ಗದ ಹಿರಿಯೂರು ಮೂಲದ ಮಮತಾ(39) ಎಂಬುವರು ಹತ್ಯೆಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹಿಂದಿನ ಒಂದು ವರ್ಷದಿಂದ ಕೆಲಸ ಮಾಡುತಿದ್ದ ಮಮತಾ, ತನ್ನ ಸ್ನೇಹಿತೆಯೊಂದಿಗೆ ಒಟ್ಟಿಗೆ ವಾಸವಾಗಿದ್ದರು. ಡಿಸೆಂಬರ್ 24ರಂದು ಮಮತಾ ಅವರ ಸ್ನೇಹಿತೆ ಊರಿಗೆ ಹೋಗಿದ್ದಾಗ ಘಟನೆ ನಡೆದಿದೆ. ಈ ಸಂಬಂಧ ಮಮತಾ ಜೊತೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುಧಾಕರ್ ಎಂಬಾತನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕೆ.ಎಸ್.ಲೇಔಟ್ ಠಾಣೆ ಪೊಲೀಸರು ಹೇಳಿದ್ದಾರೆ.

ಆಸ್ಪತ್ರೆಯೊಂದರಲ್ಲಿ ಸುಧಾಕರ್ ಹಾಗೂ ಮಮತಾ ಇಬ್ಬರೂ ಸ್ಟಾಫ್ ನರ್ಸ್ ಕೆಲಸ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಇಬ್ಬರ ನಡುವೆ ಪರಸ್ಪರ ಪ್ರೀತಿ ಮೂಡಿತ್ತು. ಇತ್ತೀಚೆಗೆ ಕುಟುಂಬಸ್ಥರ ನಿರ್ಧಾರದ ಮೇರೆಗೆ ಬೇರೊಂದು ಯುವತಿಯೊಂದಿಗೆ ಸುಧಾಕರ್‍ಗೆ ನಿಶ್ಚಿತಾರ್ಥವಾಗಿತ್ತು. ಈ ವಿಚಾರ ತಿಳಿದ ಮಮತಾ ತನ್ನನ್ನೇ ಮದುವೆಯಾಗು ಎಂದು ಸುಧಾಕರ್‌ ನ ಮೇಲೆ ಒತ್ತಡ ಹೇರಲಾರಂಭಿಸಿದ್ದಳು. ಇದರಿಂದ ಹೆದರಿದ್ದ ಸುಧಾಕರ್ ಡಿಸೆಂಬರ್ 24ರಂದು ಮಮತಾಳ ಮನೆಗೆ ಬಂದು ಕತ್ತು ಕೊಯ್ದು ಹತ್ಯೆಗೈದು ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News