Bengaluru | ಅಝೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಆರೋಪ: 25 ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಬೆಂಗಳೂರು : ಸರ್ಜಾಪುರದಲ್ಲಿರುವ ಅಝೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಮೆರೆದ ಆರೋಪದ ಮೇಲೆ 25 ಎಬಿವಿಪಿ ಕಾರ್ಯಕರ್ತರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮಂಗಳವಾರ ಸಂಜೆ ಯೂನಿವರ್ಸಿಟಿ ಎದುರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಕಾಶ್ಮೀರದ ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವ ಚರ್ಚೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) SPARK ವಿದ್ಯಾರ್ಥಿ ವೃಂದ ಆಯೋಜಿಸಿದ್ದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆ ವೇಳೆ ಯೂನಿವರ್ಸಿಟಿಯ ಮಾನ್ಯತೆ ರದ್ದುಪಡಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಎಬಿವಿಪಿ ಘೋಷಿಸಿತ್ತು. ಇದೇ ವೇಳೆ ಯೂನಿವರ್ಸಿಟಿ ಪರ ವಿದ್ಯಾರ್ಥಿಗಳು ಒಳಗಡೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಯೂನಿವರ್ಸಿಟಿ ಆವರಣಕ್ಕೆ ನುಗ್ಗಿ ನಾಮಫಲಕಕ್ಕೆ ಮಸಿ ಬಳಿದು ಹಿಂಸಾತ್ಮಕ ವರ್ತನೆ ತೋರಿದರೆಂದು ಆರೋಪಿಸಲಾಗಿದೆ.
ಸರ್ಜಾಪುರ ಪೊಲೀಸರು ತಕ್ಷಣ ಕ್ರಮ ಕೈಗೊಂಡು 25 ಕಾರ್ಯಕರ್ತರನ್ನು ಬಂಧಿಸಿ ಗಲಾಟೆಗೆ ತೆರೆ ಎಳೆದರು.
ಬುಧವಾರ ಬೆಳಿಗ್ಗೆ ಯೂನಿವರ್ಸಿಟಿ ಸೆಕ್ಯೂರಿಟಿ ಹೆಡ್ ಎಸ್.ವಿಲ್ಸನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಒತ್ತಾಯಪೂರ್ವಕ ಪ್ರವೇಶ, ಸೆಕ್ಯೂರಿಟಿಗಳಾದ ಜಗದೀಶ್, ಚಂದನ್ ಮಹಾಲಿಕ್, ಚಟ್ಟಾರ್ ಬಹುದ್ದೂರ್, ನರೇಶ್, ಶ್ರೀಪತಿ ಮತ್ತು ಹರೀಶ್ ಮೇಲೆ ದೊಣ್ಣೆಗಳಿಂದ ಕೊಲೆ ಬೆದರಿಕೆ ಹಾಗೂ ಪ್ರಥಮ ಬಿಎ ವಿದ್ಯಾರ್ಥಿ ಮುಹಮ್ಮದ್ ಅಲಿ ಅಹಮದ್ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ.
ಹೆಡ್ ಎಸ್ ವಿಲ್ಸನ್ ನೀಡಿದ ದೂರಿನಂತೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ 25 ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಮುಂದಿನ ಕ್ರಮವಾಗಿ ಬಂಧಿತ 25 ಎಬಿವಿಪಿ ಕಾರ್ಯಕರ್ತರು ಆನೇಕಲ್ ನ್ಯಾಯಾಲಯದಲ್ಲಿ ನಿಯಮಿತ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದಾರೆ.