Bengaluru | ಜಿಎಸ್‍ಟಿ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂ. ಸುಲಿಗೆ: ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆ(ಜಿಎಸ್‍ಟಿ) ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಯೊಬ್ಬನನ್ನು ಬೆದರಿಸಿ 5 ಲಕ್ಷ ರೂ. ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿಯಲ್ಲಿರುವ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್ ಹಾಗೂ ದಾದಾಪೀರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ನಕಲಿ ಐಡಿ ಕಾರ್ಡ್ ತೋರಿಸಿ ಗುಟ್ಕಾ ವ್ಯಾಪಾರಿಯಿಂದ 5 ಲಕ್ಷ ರೂ. ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬನಶಂಕರಿಯಲ್ಲಿರುವ ಜಿಎಸ್‍ಟಿ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಇಬ್ಬರೂ ಆರೋಪಿಗಳು ಹೊರಗುತ್ತಿಗೆ ಆಧಾರದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಸಿಎಲ್‍ಟಿಎಸ್ ಹಾಗೂ ಇಂಟಲಿಜೆನ್ಸ್ ಅಧಿಕಾರಿಗಳಂತೆ ನಕಲಿ ಐಡಿ ಕಾರ್ಡ್‍ಗಳನ್ನು ಮಾಡಿಸಿಕೊಂಡಿದ್ದ ಆರೋಪಿಗಳು, ಜನವರಿ 10ರಂದು ಪೀಣ್ಯದಲ್ಲಿ ಓರ್ವ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ವಸೂಲಿ ಮಾಡಿದ್ದರು.
ಆರೋಪಿತರ ಕಾರ್ಯವೈಖರಿ ಬಗ್ಗೆ ಅನುಮಾನಗೊಂಡ ಕಚೇರಿ ಅಧಿಕಾರಿಗಳು ಫೆಬ್ರವರಿ 17ರಂದು ಅವರು ವಾಸವಿದ್ದ ಕಚೇರಿಯ ಕೊಠಡಿಯಲ್ಲಿ ತಪಾಸಣೆ ನಡೆಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ನಕಲಿ ಐಡಿ ಕಾರ್ಡ್‍ಗಳು, ಸರ್ಚ್ ವಾರೆಂಟ್ ಪ್ರತಿಗಳು ಪತ್ತೆಯಾಗಿವೆ. ಕೂಡಲೇ ಜಿಎಸ್‍ಟಿ ಅಧಿಕಾರಿಗಳು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜಿಎಸ್‍ಟಿ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಇಬ್ಬರನ್ನೂ ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.