×
Ad

Bengaluru | ನರ್ಸ್ ಮಾಡಿದ ಎಡವಟ್ಟಿನಿಂದ ಆರು ತಿಂಗಳ ಮಗುವಿನ ಬೆರಳು ತುಂಡು!

ನರ್ಸ್, ವೈದ್ಯರು, ಆಸ್ಪತ್ರೆಯ ಮಂಡಳಿ ವಿರುದ್ಧ ಪ್ರಕರಣ ದಾಖಲು

Update: 2026-02-25 22:11 IST

ಸಾಂದರ್ಭಿಕ ಚಿತ್ರ (Image by onlyyouqj on Freepik)

ಬೆಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಮಾಡಿದ ಎಡವಟ್ಟಿನಿಂದ ಆರು ತಿಂಗಳ ಮಗುವಿನ ಬೆರಳು ಭಾಗಶಃ ತುಂಡಾಗಿದ್ದು, ನಿರ್ಲಕ್ಷ್ಯತೆ ತೋರಿದ ಆರೋಪದ ಮೇಲೆ ಆಸ್ಪತ್ರೆಯ ನರ್ಸ್, ವೈದ್ಯರು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಫೆಬ್ರವರಿ 19ರಂದು ವಿಜಯ್ ಕುಮಾರ್ ಎಂಬವರು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ತಮ್ಮ ಗಂಡು ಮಗುವನ್ನು ಚಿಕಿತ್ಸೆಗಾಗಿ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಮಗುವನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಮಗುವಿಗೆ ಕಫದ ಸಮಸ್ಯೆ ಇದೆ ಎಂದ ವೈದ್ಯರು ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಫೆಬ್ರವರಿ 24ರಂದು ಮಧ್ಯಾಹ್ನ 3 ಗಂಟೆಗೆ ಮಗುವನ್ನು ಡಿಸ್ಚಾರ್ಜ್ ಮಾಡಬೇಕಾಗಿತ್ತು ಮತ್ತು ಅದರ ಪ್ರಕಾರ, ವಾರ್ಡ್‍ನಲ್ಲಿ ಡಿಸ್ಚಾರ್ಜ್ ಪ್ರಕ್ರಿಯೆ ನಡೆಯುತ್ತಿರುವಾಗ ಆಸ್ಪತ್ರೆಯ ಬಿಲ್ ಪಾವತಿಸಲಾಯಿತು. ಡಿಸ್ಚಾರ್ಜ್ ಸಮಯದಲ್ಲಿ, ಕರ್ತವ್ಯದಲ್ಲಿದ್ದ ನರ್ಸ್ ಡ್ರಿಪ್ ತೆಗೆದಿದ್ದು, ಡ್ರೆಸ್ಸಿಂಗ್ ಮಾಡುವಾಗ, ಮಗುವಿನ ಎಡಗೈಯ ಕಿರುಬೆರಳಿನ ತುದಿಯನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದಾಗಿ ಮಗುವಿಗೆ ತೀವ್ರ ನೋವು ಮತ್ತು ಗಾಯವಾಗಿದೆ ಎಂದು ದೂರುದಾರ ವಿಜಯ್ ಕುಮಾರ್ ಆರೋಪಿಸಿರುವುದಾಗಿ ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125(ಬಿ) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಅಡಿಯಲ್ಲಿ ನರ್ಸ್, ವೈದ್ಯರು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News