ವಾಣಿಜ್ಯ, ಕೈಗಾರಿಕಾ ಬಳಕೆದಾರರಿಗೆ ಕರೆಂಟ್ ಶಾಕ್
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು 2025-26ರ ಹಣಕಾಸು ವರ್ಷಕ್ಕೆ ವಿದ್ಯುತ್ ಸುಂಕಗಳನ್ನು ಪರಿಷ್ಕರಿಸಿದೆ. ಆದರೆ, ಈ ಹಿಂದೆ ಯಾವುದೇ ಹೆಚ್ಚಳವನ್ನು ವಿಧಿಸಲಾಗುವುದಿಲ್ಲ ಎಂದು ಭರವಸೆ ನೀಡಿದ ಹೊರತಾಗಿಯೂ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ದರಗಳನ್ನು ಎಪ್ರಿಲ್ 2025ರಿಂದಲೇ ಅನ್ವಯವಾಗುವಂತೆ ಹೆಚ್ಚಿಸಲಾಗಿದ್ದು, ಆಯೋಗದ ಈ ನಡೆಯು ವ್ಯಾಪಾರ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಸುಂಕ ಹೆಚ್ಚಳ :
ಆಯೋಗವು ವಾಣಿಜ್ಯ ವಿಭಾಗಗಳಾದ ಎಲ್ ಟಿ-3ಎ ಮತ್ತು ಎಚ್ ಟಿ-2ಬಿ ಮತ್ತು ಕೈಗಾರಿಕಾ ವಿಭಾಗಗಳಾದ ಎಲ್ ಟಿ-5 ಮತ್ತು ಎಚ್ ಟಿ-2ಎ ಗಳಿಗೆ ಹೆಚ್ಚಿನ ಇಂಧನ ಮತ್ತು ಬೇಡಿಕೆ ಶುಲ್ಕಗಳನ್ನು ಅನುಮೋದಿಸಿದೆ. ಇವು ಅಂಗಡಿಗಳು, ಉತ್ಪಾದನಾ ಘಟಕಗಳು, ಎಂಎಸ್‌ಎಂಇಗಳು, ಐಟಿ ಮತ್ತು ಟೆಕ್ ಪಾರ್ಕ್ ಗಳು, ಥಿಯೇಟರ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಅನ್ವಯಿಸುತ್ತವೆ.
ಪರಿಷ್ಕೃತ ರಚನೆಯ ಅಡಿಯಲ್ಲಿ, ಪ್ರತೀ ಕಿಲೋವ್ಯಾಟ್‌ಗೆ 235 ರೂ. ಸ್ಥಿರ ಶುಲ್ಕದೊಂದಿಗೆ ಎಲ್‌ಟಿ -3ಎ ವಾಣಿಜ್ಯ ಸುಂಕಗಳನ್ನು ಪ್ರತೀ ಯೂನಿಟ್‌ಗೆ 7 ರೂ. ನಿಂದ 7.10ರೂ. ಗೆ ಹೆಚ್ಚಿಸಲಾಗಿದೆ. ಎಲ್ ಟಿ -5 ಕೈಗಾರಿಕಾ ಸುಂಕಗಳು ಪ್ರತೀ ಯೂನಿಟ್‌ಗೆ 4.50 ರೂ. ನಿಂದ 5.20 ರೂ.ಗೆ ಏರಿದ್ದು, ಪ್ರತೀ ಅಶ್ವಶಕ್ತಿಗೆ 165 ರೂ. ಸ್ಥಿರ ಶುಲ್ಕವಾಗಿದೆ.
ಎಚ್ ಟಿ-2ಎ ಕೈಗಾರಿಕಾ ಗ್ರಾಹಕರು ಈಗ ಪ್ರತೀ ಯೂನಿಟ್‌ಗೆ 6.70 ರೂ. ಪಾವತಿಸಲಿದ್ದಾರೆ. ಪ್ರತೀ ಕೆವಿಎಗೆ 365 ರೂ. ಡಿಮ್ಯಾಂಡ್ ಶುಲ್ಕ ವಿಧಿಸಲಾಗುತ್ತದೆ. ವಾಣಿಜ್ಯ ಸಂಕೀರ್ಣಗಳು, ಚಿತ್ರಮಂದಿರಗಳು ಮತ್ತು ಹೋಟೆಲ್‌ಗಳಂತಹ ಎಚ್.ಟಿ.-2ಬಿ ವಾಣಿಜ್ಯ ಗ್ರಾಹಕರು ಪ್ರತೀ ಯೂನಿಟ್‌ಗೆ 5.95 ರೂ.ನಿಂದ 6.90 ರೂ.ಗೆ ತೀವ್ರ ಏರಿಕೆ ಕಾಣಲಿದ್ದಾರೆ ಮತ್ತು ಪ್ರತೀ ಕೆವಿಎಗೆ 390 ರೂ. ಡಿಮ್ಯಾಂಡ್ ಶುಲ್ಕ ವಿಧಿಸಲಾಗುತ್ತದೆ.
ಹಾಗೆಯೇ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸರಕಾರ 16,021 ಕೋಟಿ ರೂ. ಸಬ್ಸಿಡಿ ನೀಡಿದ್ದರೂ, ವಾಸ್ತವ ಅಗತ್ಯ 20,640 ಕೋಟಿ ರೂ.ಗಳಷ್ಟಿತ್ತು. ಸರಕಾರ ಹೆಚ್ಚುವರಿ ಅನುದಾನ ನೀಡಿದ ಹೊರತಾಗಿಯೂ ಉಳಿದ ಬಾಕಿ ಮೊತ್ತವನ್ನು ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಂದ ವಸೂಲಿ ಮಾಡಲು ಆಯೋಗ ಅನುಮತಿ ನೀಡಿದೆ. 10ಎಚ್ ಪಿ ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಮುಂದುವರಿಯಲಿದೆ. ಅಲ್ಲದೆ, ಪ್ರತೀ ಯೂನಿಟ್ ದರವನ್ನು 8.30 ರೂ.ನಿಂದ 6.57 ರೂ.7.79 ರೂ. ವ್ಯಾಪ್ತಿಗೆ ಇಳಿಸಲಾಗಿದೆ.