ಕನ್ನಡ ಗೆಳೆಯರ ಬಳಗದ ಸಂಚಾಲಕ ಬಾ.ಹ.ಉಪೇಂದ್ರ ನಿಧನ
ಬೆಂಗಳೂರು, ಮಾ. 5: ಕನ್ನಡ ಗೆಳೆಯರ ಬಳಗದ ಸಂಚಾಲಕ, ಎಚ್.ಎ.ಎಲ್.ನ ನಿವೃತ್ತ ಡಿಜಿಎಂ ಬಾಣಾಸಂದ್ರ ಹನುಮಂತರಾಯ ಉಪೇಂದ್ರ (66) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಚ್ಎಎಲ್ ನಲ್ಲಿ ಉನ್ನತ ಅಧಿಕಾರಿಯಾಗಿದ್ದ ಉಪೇಂದ್ರ ಅವರು ಅಪ್ರತಿಮ ಕನ್ನಡ ಹೋರಾಟಗಾರರಾಗಿದ್ದರು. ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ ಡಾ ಎಂ. ಚಿದಾನಂದಮೂರ್ತಿ ಅವರ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗವು 1986ಲ್ಲಿ ನಡೆಸಿದ ‘ಕನ್ನಡ ದೂರದರ್ಶನ’ ಹೋರಾಟದ ಮೂಲಕ ಕನ್ನಡ ಹೋರಾಟಕ್ಕೆ ಪ್ರವೇಶಿಸಿದರು. ಅಂದಿನಿಂದ ಇಂದಿನವರೆಗೆ ನಡೆದಿರುವ ಎಲ್ಲ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ಶಕ್ತಿ ಕೇಂದ್ರದ ಸಹ ಕಾರ್ಯದರ್ಶಿ, ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು.
ಬರವಣಿಗೆಯಲ್ಲೂ ಪರಿಣಿತರಾಗಿದ್ದ ಅವರು ಕಥೆ, ಕವನ, ಲೇಖನಗಳನ್ನು ಬರೆದಿದ್ದು, ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದದಲ್ಲಿ ಪರಣಿತರಾಗಿದ್ದ ಅವರು ರಾಜ್ಯ ಸರ್ಕಾರಕ್ಕೆ ಕೆಲವು ತಾಂತ್ರಿಕ ವಿಷಯವನ್ನು ಅನುವಾದಿಸಿಕೊಟ್ಟಿದ್ದಾರೆ. ತಾಂತ್ರಿಕ ಸಾಹಿತ್ಯ ರಚನೆ, ಅನುವಾದದಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಮೆಚ್ಚುಗೆ ಗಳಿಸಿದ್ದರು. ಹಲವು ತಾಂತ್ರಿಕ ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದರು. ‘ಕನ್ನಡ ಕಿಸೆಗನ್ನಡಿ’ಯಂತ ಅನನ್ಯ ಕೃತಿಯನ್ನು ಸಂಪಾದಿಸಿದ್ದರು.
ಮೃತರು ಪತ್ನಿ , ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಉಪೇಂದ್ರ ಅವರ ದೇಹವನ್ನು ತುಮಕೂರಿನ ಸಿದ್ದಗಂಗಾ ಅಸ್ಪತ್ರೆಗೆ ದಾನ ಮಾಡಲಾಗಿದೆ.
ಕನ್ನಡದ ವಿಚಾರದಲ್ಲಿ ಬಾಣಾಸಂದ್ರ ಹನುಮಂತರಾಯ ಉಪೇಂದ್ರ ಅವರದು ಹನುಮನ ನಿಷ್ಟೆ; ಬುದ್ಧನ ತ್ಯಾಗ’. ನಾಲ್ಕು ದಶಕಗಳು ಕನ್ನಡದ ಹಿತರಕ್ಷಣೆಗೆ ತನು, ಮನ, ಧನ ಸಮರ್ಪಿಸಿದ ತ್ಯಾಗ ಜೀವಿಯಾಗಿದ್ದರು. ಅವರ ನಿಧನ ಕನ್ನಡ ಗೆಳೆಯರ ಬಳಗದ ಚೇತನ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಅವರ ನಿಧನವು ಕನ್ನಡ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಗೆೆಯ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಸಂತಾಪ ವ್ಯಕ್ತಡಿಸಿದ್ದಾರೆ.