×
Ad

ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಬೆಂಗಳೂರು ನಗರ ಪೊಲೀಸ್ ಕಟ್ಟುನಿಟ್ಟಿನ ಕ್ರಮ

"ಯಾವುದೇ ಕಾರಣಕ್ಕೂ ಅರ್ಜಿದಾರರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತಿಲ್ಲ"

Update: 2026-02-25 23:52 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಪಾಸ್‌ಪೋರ್ಟ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ಪರಿಶೀಲನೆ ಅವಧಿಯಿಡೀ ಬಾಡಿ ಕ್ಯಾಮೆರಾ ಧರಿಸುವುದನ್ನು ಕಡ್ಡಾಯಗೊಳಿಸಿದೆ ಎಂದು thehindu.com ವರದಿ ಮಾಡಿದೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಬುಧವಾರ ಹೊರಡಿಸಿದ ಸುತ್ತೋಲೆಯ ಪ್ರಕಾರ, ಅರ್ಜಿದಾರರು ನೀಡಿರುವ ವಸತಿ ವಿಳಾಸಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ನೆರೆಹೊರೆಯವರು ಹಾಗೂ ಸ್ಥಳೀಯ ನಿವಾಸಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಬೇಕು. ಯಾವುದೇ ಸನ್ನಿವೇಶದಲ್ಲೂ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಸಾಕ್ಷ್ಯಾಧಾರಗಳಿಲ್ಲದೆ ವ್ಯತಿರಿಕ್ತ ವರದಿಗಳನ್ನು ಸಲ್ಲಿಸುವುದನ್ನು ನಿಷೇಧಿಸಲಾಗಿದೆ. ಲಂಚದ ಬೇಡಿಕೆ, ಅನಗತ್ಯ ವಿಳಂಬ, ಕಿರುಕುಳ ಅಥವಾ ದುರುದ್ದೇಶಪೂರ್ವಕ ವರ್ತನೆ ನಡೆಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಅರ್ಜಿದಾರರಿಗೆ ಅನಾನುಕೂಲ ಉಂಟುಮಾಡುವ ಯಾವುದೇ ಕ್ರಮಕ್ಕೂ ಅವಕಾಶ ಇರಬಾರದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಅರ್ಜಿದಾರರಿಗೆ ಎಸ್‌ಎಂಎಸ್ ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡಬೇಕು. ಪರಿಶೀಲನಾ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ದಾಖಲಿಸಬೇಕು. ಪರಿಶೀಲನೆಯಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿಗಳು ಪ್ರಕ್ರಿಯೆ ಆರಂಭದಿಂದ ಅಂತ್ಯವರೆಗೆ ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಿರಬೇಕು.

ವಿಭಾಗೀಯ ಉಪ ಪೊಲೀಸ್ ಆಯುಕ್ತರು ಮಾರ್ಗಸೂಚಿಗಳ ಪಾಲನೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸಿ ಮುಖ್ಯ ಕಚೇರಿಗೆ ಸಾಪ್ತಾಹಿಕ ವರದಿ ಸಲ್ಲಿಸಬೇಕು. ಸೂಚಿಸಿದ ನಿಯಮಗಳಲ್ಲಿ ಯಾವುದೇ ವಿನಾಯಿತಿ ಅಗತ್ಯವಿದ್ದರೆ ಮುಂಚಿತ ಅನುಮೋದನೆ ಪಡೆಯಬೇಕು. ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

‘ಕೆಲವು ಪ್ರದೇಶಗಳಲ್ಲಿ ಸಿಬ್ಬಂದಿ 200ರಿಂದ 1,000 ರೂ.ವರೆಗೆ ಲಂಚ ಪಡೆದಿರುವ ದೂರುಗಳು ಬಂದಿವೆ. ಅರ್ಜಿದಾರರಿಗೆ ತೊಂದರೆ ಉಂಟುಮಾಡಲು ಉದ್ದೇಶಪೂರ್ವಕವಾಗಿ ವ್ಯತಿರಿಕ್ತ ವರದಿಗಳನ್ನು ಸಲ್ಲಿಸಿರುವ ಉದಾಹರಣೆಗಳೂ ಇವೆ. ಈ ಸಮಸ್ಯೆಗೆ ಬಾಡಿ ಕ್ಯಾಮೆರಾ ವ್ಯವಸ್ಥೆ ಪರಿಣಾಮಕಾರಿ ಪರಿಹಾರವಾಗಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪರಿಶೀಲನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಹಾಗೂ ಉದ್ದೇಶಪೂರ್ವಕ ವಿಳಂಬ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸಿಬ್ಬಂದಿ ಹೆಚ್ಚು ಜವಾಬ್ದಾರಿಯಿರಲಿದ್ದು, ನಾಗರಿಕರಿಗೆ ತ್ವರಿತ ಸೇವೆ ದೊರೆಯಲಿದೆ’ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News