ಬೆಂಗಳೂರು : ವಿಧಾನ ಪರಿಷತ್ತಿನ ನಾಲ್ಕೂ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ನಮಗಿತ್ತು. ಆದರೆ ಚುನಾವಣಾ ಫಲಿತಾಂಶ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಬಂದಿದೆ. ಈ ಫಲಿತಾಂಶವನ್ನು ಕೇವಲ ಚುನಾವಣಾ ಹಿನ್ನಡೆಯಾಗಿ ಪರಿಗಣಿಸದೆ, ಕಾಂಗ್ರೆಸ್ ಪಕ್ಷದ ಪಾಲಿಗೆ ಗಂಭೀರ ಆತ್ಮಾವಲೋಕನದ ಸಂದರ್ಭವಾಗಿ ಸ್ವೀಕರಿಸಿದ್ದೇವೆ. ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಚುನಾವಣಾ ಸೋಲಿನ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಶಿಕ್ಷಕರು ಮತ್ತು ಪದವೀಧರರು ಸಮಾಜದ ಪ್ರಜ್ಞಾವಂತ ಮತದಾರ ವರ್ಗವಾಗಿದ್ದು, ಅವರ ರಾಜಕೀಯ ನಿಲುವುಗಳು ಹಾಗೂ ನಿರೀಕ್ಷೆಗಳಿಗೆ ವಿಶೇಷ ಮಹತ್ವವಿದೆ. ಈ ಚುನಾವಣೆಯಲ್ಲಿ ಅಂತಹ ಮತದಾರರ ವಿಶ್ವಾಸವನ್ನು ಗಳಿಸಲು ಸಾಧ್ಯವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅವರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ, ಪಕ್ಷದ ನಿಲುವುಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಹಾಗೂ ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸುವಲ್ಲಿ ಆಗಿರುವ ಕೊರತೆಗಳ ಬಗ್ಗೆ ಆತ್ಮಾವಲೋಕನ ನಡೆಸುತ್ತೇವೆ ಎಂದಿದ್ದಾರೆ.

ಶಿಕ್ಷಕರು ಮತ್ತು ಪದವೀಧರರ ನಿರೀಕ್ಷೆಗಳು, ಉದ್ಯೋಗದ ಅಭದ್ರತೆ, ಶೈಕ್ಷಣಿಕ ವ್ಯವಸ್ಥೆಯ ಸವಾಲುಗಳು ಹಾಗೂ ಅವರ ವೃತ್ತಿಪರ ಹಿತಾಸಕ್ತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರ್ಕಾರ ಎಷ್ಟರಮಟ್ಟಿಗೆ ಸ್ಪಂದಿಸಿದೆ ಎಂಬುದನ್ನೂ ಪರಾಮರ್ಶಿಸುತ್ತೇವೆ. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳು ಹಾಗೂ ಪಕ್ಷದ ನಿಲುವುಗಳನ್ನು ಮತದಾರರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಆಗಿರುವ ನ್ಯೂನತೆಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಈ ಫಲಿತಾಂಶ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಹಾಗೂ ಜನಪರ ಬದ್ಧತೆಯನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ ನಮ್ಮ ಸಂಘಟನಾ ಕಾರ್ಯವೈಖರಿ, ಜನಸಂಪರ್ಕ ಹಾಗೂ ರಾಜಕೀಯ ಕಾರ್ಯತಂತ್ರಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳುವ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದಿದ್ದಾರೆ.

ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಚುನಾವಣಾ ಫಲಿತಾಂಶದ ಕುರಿತು ಪಕ್ಷದ ಎಲ್ಲ ಹಂತಗಳಲ್ಲಿ ಸಮಗ್ರ ಪರಾಮರ್ಶೆ ನಡೆಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಶಿಕ್ಷಕರು, ಪದವೀಧರರು ಹಾಗೂ ಜನಸಾಮಾನ್ಯರ ವಿಶ್ವಾಸವನ್ನು ಗಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor