ಹುತಾತ್ಮ ಪೊಲೀಸರ ಸ್ಮರಣೆ ಒಂದೇ ದಿನಕ್ಕೆ ಸೀಮಿತಗೊಳಿಸಬಾರದು : ಕರ್ನಲ್ ಶರಣಪ್ಪ ಸಿಕೆನಪುರೆ
ಬೀದರ್ : ಪ್ರತಿ ವರ್ಷ ಸಾವಿರಾರು ಪೊಲೀಸರು ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾಗುತ್ತಾರೆ. ಅವರ ಸ್ಮರಣೆಯನ್ನು ಒಂದೇ ದಿನಕ್ಕೆ ಸೀಮಿತಗೊಳಿಸಬಾರದು ಎಂದು ಕರ್ನಲ್ ಶರಣಪ್ಪ ಸಿಕೆನಪುರೆ ಅವರು ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕಚೇರಿಯ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂದಂಡೆ ಸಮರ್ಪಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು.
ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಮೂಲಕ ಪೊಲೀಸರು ದೇಶದ ಏಕತೆ, ಅಖಂಡತೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿರುವದರಿಂದಲೇ ನಾವೆಲ್ಲರೂ ನೆಮ್ಮದಿಯಿಂದ ಇದ್ದೇವೆ. ಪೊಲೀಸ್ ಕರ್ತವ್ಯ ನಿಷ್ಠೆಗೆ ಅವರ ಕುಟುಂಬ ಸದಸ್ಯರ ಸಹಕಾರ ಕೂಡ ಸಾಕಷ್ಟಿದೆ. ಹುತಾತ್ಮ ಪೊಲೀಸರ ಸ್ಮರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಹುತಾತ್ಮ ಪೊಲೀಸರ ಮಕ್ಕಳಿಗೆ ತಮ್ಮ ಶಾಲೆಯಲ್ಲಿ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲಾಗುವುದು ಎಂದರು.
ಎಸ್ಪಿ ಪ್ರದೀಪ್ ಗುಂಟಿ ಅವರು ಮಾತನಾಡಿ, ಅ. 21, 1959 ರಂದು ಲಡಾಕ್ ಪ್ರದೇಶದಲ್ಲಿ ಎಸ್.ಐ ಕರಂ ಸಿಂಗ್ ನೇತೃತ್ವದ 21 ಜನ ಕೇಂದ್ರ ಪೊಲೀಸ್ ಮೀಸಲು ಪಡೆಯ ಸಿಬ್ಬಂದಿಗಳ ತಂಡ ಗಸ್ತು ತಿರುಗುವ ಸಂದರ್ಭದಲ್ಲಿ ಚೀನಾ ಸೈನ್ಯ ಏಕಾಏಕಿ ದಾಳಿ ನಡೆಸಿತು. ಈ ಸಮಯದಲ್ಲಿ ವೀರಾವೇಶದಿಂದ ಹೋರಾಡಿ ನಮ್ಮ 10 ಜನ ಪೊಲೀಸ್ ಸಿಬ್ಬಂದಿಗಳು ಹುತಾತ್ಮರಾದರು. ಹಾಗೆಯೇ 11 ಜನ ಪೊಲೀಸ್ ಸಿಬ್ಬಂದಿಗಳು ಒತ್ತೆಯಾಳಾದರು. ಅವರ ತ್ಯಾಗ, ಬಲಿದಾನದ ಸಂಕೇತವಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಕೆಳೆದ ಒಂದು ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹುತಾತ್ಮ ಪೊಲೀಸರ ಹೆಸರುಗಳು ವಾಚಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಇತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಗಣ್ಯರಿಂದ ಹುತಾತ್ಮ ಸ್ಮಾರಕಕ್ಕೆ ಹೂದಂಡೆ ಸಮರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಚಂದ್ರಕಾಂತ್ ಗುದಗೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ, ಡಿವೈಎಸ್ಪಿ ಶಿವನಗೌಡ ಪಾಟೀಲ್ ಹಾಗೂ ಭಾಲ್ಕಿ ಡಿವೈಎಸ್ಪಿ ಶಿವಾನಂದ್ ಪವಾಡಶೆಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ನಗರದ ಗಣ್ಯರು ಉಪಸ್ಥಿತರಿದ್ದರು.