ಜ. 2 ರಿಂದ 90 ದಿನಗಳ ಮಧ್ಯಸ್ಥಿಕೆ ಅಭಿಯಾನ : ನ್ಯಾ. ಪ್ರಕಾಶ್ ಅರ್ಜುನ್ ಬನಸೋಡೆ
ಬೀದರ್ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಸಂಯುಕ್ತಾಶ್ರಯದಲ್ಲಿ ಬೀದರ್ ಜಿಲ್ಲಾದ್ಯಂತ ಜ.2 ರಿಂದ 90 ದಿನ ಮಧ್ಯಸ್ಥಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ್ ಅರ್ಜುನ್ ಬನಸೋಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಅಭಿಯಾನವು ಆರಂಭವಾಗಲಿದ್ದು, ಅದರಲ್ಲಿ ಬಾಕಿ ಇರುವ ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಲಯದ ಪ್ರಕರಣಗಳು ಮೋಟಾರ್ ಅಪಘಾತ, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ, ಸೇವಾ ಪ್ರಕರಣಗಳು ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕರ ವ್ಯಾಜ್ಯ ಪ್ರಕರಣಗಳು, ಭೂ ಸ್ವಾಧಿನ ಪ್ರಕರಣಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ, ನ್ಯಾಯಾಲಯಗಳಿಂದ ಪ್ರಕರಣಗಳನ್ನು ವರ್ಗಾಯಿಸಿಕೊಂಡು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ್ ಅಥವಾ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ 90 ದಿನಗಳ ಮಧ್ಯಸ್ಥಿಕೆ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.