ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ, ರೈತರ ಸಾಲ ಮನ್ನಾ ಮಾಡಲು ಆಗ್ರಹ
ಬೀದರ್ : ಜಿಲ್ಲೆಯ ಹಳ್ಳಿಖೇಡ (ಬಿ) ಗ್ರಾಮದ ಸಮೀಪವಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಶಕ್ಕೆ ಪಡೆದು ಪುನರಾರಂಭ ಮಾಡಬೇಕು ಹಾಗೂ ರೈತರ ಎಲ್ಲಾ ವಿಧದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರು, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೌರಾಡಳಿತ ಹಾಗೂ ಹಜ್ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. 2025-26ನೇ ಹಂಗಾಮಿನಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸುವ ಬಗ್ಗೆ ಈ ಹಿಂದೆ ನಿರ್ಧಾರ ಕೈಗೊಳ್ಳಲಾಗಿದ್ದರೂ ಅದು ಜಾರಿಗೆ ಬಂದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು ಎಂದು ತಿಳಿಸಲಾಗಿದೆ.
2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಅಗತ್ಯ ಅನುದಾನ ಕಾಯ್ದಿರಿಸಬೇಕು. ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ಸಹಕಾರ ಸಂಸ್ಥೆಗಳಲ್ಲಿ ಸರ್ಕಾರದ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಬೇಕು. ಕಬ್ಬಿನ ಬಾಕಿ ಹಣವನ್ನು ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ಶೇ.18ರ ಬಡ್ಡಿಯೊಂದಿಗೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಇದೇ ವೇಳೆ ಸಕ್ಕರೆ ಕಾರ್ಖಾನೆಗಳಲ್ಲಿ ರಿಕವರಿ ಅಧಿಕಾರಿ ನೇಮಕ ಮಾಡುವುದು, ಕರ್ನಾಟಕ ಕಬ್ಬು ಖರೀದಿ ಮತ್ತು ಪೂರೈಕೆ ನಿಯಂತ್ರಣ ಕಾಯ್ದೆ–2013ರಲ್ಲಿ ತಿದ್ದುಪಡಿ ಮಾಡಿ ಜಿಲ್ಲಾ ಮಟ್ಟದಲ್ಲಿ ಸುಗರ್ ಕಂಟ್ರೋಲ್ ಬೋರ್ಡ್ ಸ್ಥಾಪಿಸುವುದನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮಾರ್ಚ್ 6ರಂದು ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ಈ ಬೇಡಿಕೆಗಳನ್ನು ಪರಿಗಣಿಸದಿದ್ದರೆ ಮಾರ್ಚ್ 7ರಿಂದ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಚಳುವಳಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಎಸ್‌ಕೆಎಂ ಸಂಚಾಲಕ ಬಾಬುರಾವ್ ಹೊನ್ನಾ, ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಹಾಗೂ ಬಸವರಾಜ್ ಅಷ್ಟೂರೆ ಉಪಸ್ಥಿತರಿದ್ದರು.