Bidar | ಮದರಸಾ ಶಿಕ್ಷಕರ ಮೇಲೆ ಹಲ್ಲೆ ಪ್ರಕರಣ : 18 ಮಂದಿಯ ಬಂಧನ
ಬೀದರ್ : ಬಸವಕಲ್ಯಾಣದಲ್ಲಿ ಮದರಸಾ ಶಿಕ್ಷಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ಮಾಡಿದ ಆರು ಮಂದಿ ಸೇರಿದಂತೆ ಒಟ್ಟು 18 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ 12 ಜನರನ್ನೂ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 3ರ ರಾತ್ರಿ ಸುಮಾರು 8 ಗಂಟೆಗೆ ಬಸವಕಲ್ಯಾಣದ ಪ್ರವಾಸಿ ಮಂದಿರದ ಹತ್ತಿರ ಕೆಲ ಯುವಕರು ಕುಡಿದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದರು. ಅವರನ್ನು ಸಮಾಧಾನಪಡಿಸಲು ಹೋದ ಇಬ್ಬರು ಮದರಸಾ ಶಿಕ್ಷಕರೊಂದಿಗೆ ವಾಗ್ವಿವಾದ ಉಂಟಾಗಿ, ಯುವಕರು ಅವರ ಮೇಲೆ ಹಲ್ಲೆ ನಡೆಸಿದರು. ಗಾಯಗೊಂಡ ಶಿಕ್ಷಕರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾದಾಗ, ಠಾಣೆ ಮುಂದೆ ಒಂದು ಸಮುದಾಯದ ಜನರು ಸೇರಿಕೊಂಡು ವಾಹನಗಳಿಗೆ ಅಡ್ಡಿ ಉಂಟುಮಾಡಿ ಕಾರ್ಯಾಚರಣೆಗೆ ತೊಂದರೆ ನೀಡಿದ್ದಾರೆ. ಅವರನ್ನು ಶಾಂತಿಯುತವಾಗಿ ತೆರಳಿಸಲು ಪ್ರಯತ್ನಿಸಿದರೂ ಸಹಕರಿಸದ ಹಿನ್ನೆಲೆ, ಅವರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಶಿಕ್ಷಕರ ಮೇಲೆ ಹಲ್ಲೆ ಮಾಡಿದ ಐದು ಆರೋಪಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರನೇ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ. ಎರಡನೇ ಪ್ರಕರಣದಲ್ಲಿ ಭಾಗಿಯಾದವರನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಸವಕಲ್ಯಾಣದಲ್ಲಿ ಶಾಂತಿ ವಾತಾವರಣವಿದ್ದು, ಜನತೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ಸಂಪೂರ್ಣ ಮಾಹಿತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಖಾತೆಗಳ ಮೇಲೆ ಕಣ್ಣಿಟ್ಟಿದ್ದೇವೆ. ವದಂತಿ ಹರಡುವುದು ಅಥವಾ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.