ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಕರ ಪತ್ರದಲ್ಲಿ ಸಂವಿಧಾನಕ್ಕೆ ಅವಮಾನ ಆರೋಪ; ಕ್ಷಮೆಯಾಚನೆಗೆ ಮಹೇಶ್ ಗೋರನಾಳಕರ್ ಆಗ್ರಹ
ಮಹೇಶ್ ಗೋರನಾಳಕರ್
ಬೀದರ್: ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಕರ ಪತ್ರದಲ್ಲಿ ಸಂವಿಧಾನಕ್ಕೆ ಅವಮಾನ, ಅಗೌರವ ತೋರಲಾಗಿದೆ. ಕರಪತ್ರದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರ ಭಾವಚಿತ್ರ ಇದೆ. ಅವರ ಪದನಾಮ ಇದೆ. ಹಾಗಾಗಿ ಡಾ. ಬಸವಲಿಂಗ ಪಟ್ಟದ್ದೇವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಪ್ಪು ಪಟ್ಟಿ ಪ್ರದರ್ಶನ ಮಾಡುವ ಮೂಲಕ ಹೋರಾಟ ಮಾಡುತ್ತೇವೆ ಎಂದು ಬುದ್ಧ ಬಸವ ಅಂಬೇಡ್ಕರ್ ಯುವ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೋರನಾಳಕರ್ ಅವರು ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ವಚನ ಸಂವಿಧಾನದಲ್ಲಿರುವ ತತ್ವಾದರ್ಶಗಳು ಭಾರತ ಸಂವಿಧಾನದಲ್ಲಿ ಇಲ್ಲ ಎಂದು ಬಸವ ಸಂಸ್ಕೃತಿ ಅಭಿಯಾನದ ಕರಪತ್ರದಲ್ಲಿ ಇದೆ. ವಚನ ಸಂವಿಧಾನದಲ್ಲಿರುವ ಯಾವ ವಿಷಯಗಳು ಸಂವಿಧಾನದಲ್ಲಿ ಇಲ್ಲ ಎಂದು ಅವರು ಪ್ರಶ್ನಿಸಿದರು.
ಬುದ್ಧ ಗುರುವಿನ ನಂತರ ಈ ದೇಶದಲ್ಲಿ ವೈಚಾರಿಕ ಚಳುವಳಿ ಮಾಡಿದವರು ವಿಶ್ವಗುರು ಬಸವಣ್ಣನವರು. ಅವರ ಬಗ್ಗೆ ನಮಗೆ ಗೌರವ ಇದೆ. ಅವರು ದಲಿತರ ಉದ್ದಾರಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ನಾವು ಇಷ್ಟಪಡುತ್ತೇವೆ. ಆದರೆ ಈ ಕರಪತ್ರದಲ್ಲಿ ಸಂವಿಧಾನಕ್ಕೆ ಅಗೌರವ, ಅಪಮಾನವಾಗಿದೆ. ಇದನ್ನು ನಾವು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಸಂವಿಧಾನದ ಮೂಲಕ ಜಾಗೃತಿ ಮಾಡುತ್ತೇವೆ ಎಂದು ಹೇಳುವ ಇವರು, ಬಸವ ಸಂಸ್ಕೃತಿ ಅಭಿಯಾನದ ಹೆಸರಲ್ಲಿ ಸಂವಿಧಾನವನ್ನು ಅಗೌರವ, ಅಪಪ್ರಚಾರ ಹಾಗೂ ಅಪಮಾನ ಮಾಡುವುದನ್ನು ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಮಾಡುತ್ತಿದ್ದಾರೆ. ಇದರ ಬಗ್ಗೆ ಅವರು ಕ್ಷಮೆಯಾಚಿಸಿ, ಎಲ್ಲ ಕರಪತ್ರಗಳು ಹಿಂಪಡೆಯಬೇಕು. ಇಲ್ಲದಿದ್ದರೆ ನಾಳೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.