ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕರ ಕೊಲೆಗಳನ್ನು ಖಂಡಿಸಿ ಜಾತ್ಯತೀತ ನಾಗರಿಕರ ವೇದಿಕೆಯಿಂದ ಸಿಎಂಗೆ ಮನವಿ
ಬೀದರ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕರ ಕೊಲೆಗಳನ್ನು ಖಂಡಿಸಿ ಜಾತ್ಯತೀತ ನಾಗರಿಕರ ವೇದಿಕೆಯ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇಂದು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿ ಪತ್ರದಲ್ಲಿ, ದೇಶದಲ್ಲಿ ಬಲಪಂಥಿಯ ಸಂಘಟನೆಗಳು ದಿನನಿತ್ಯ ಕಾನೂನು ಕೈಗೆತ್ತಿಕೊಂಡು ನಿರ್ದಿಷ್ಟ ಜನಾಂಗ ಮತ್ತು ಸಮುದಾಯವನ್ನು ಗುರಿ ಮಾಡುತ್ತಾ, ಗುಂಪು ಹತ್ಯೆ, ಗುಂಪು ಹಿಂಸೆ ಮತ್ತು ಅಮಾಯಕರ ಕೊಲೆ ಮಾಡುತ್ತಿವೆ. ಕರ್ನಾಟಕ ರಾಜ್ಯವು ಒಂದು ಶಾಂತಿಯ ತೋಟವಾಗಿದ್ದನ್ನು ಸಹಿಸದೇ ಹಿಂಸೆಯ ಕಾರ್ಯ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಕೊಲೆಗೆ ಕೊಲೆಯೇ ಉತ್ತರವೆನ್ನುವಂತೆ ಅರಾಜಕತೆಯನ್ನು ನಿರ್ಮಾಣ ಮಾಡುತ್ತಾ, ಕಾನೂನನ್ನೇ ಕೈಗೆತ್ತಿಕೊಳ್ಳುತ್ತ ಅಮಾಯಕರನ್ನು ಕೊಲೆ ಮಾಡಲಾಗುತ್ತಿದೆ. ಮೇ 27 ರಂದು ಯಾವುದೇ ಹಿಂಸೆಯಲ್ಲಿ ಭಾಗಿಯಾಗದೇ ಇರುವ ಅಬ್ದುಲ್ ರಹ್ಮಾನ್ ನನ್ನು ಮನೆಗೆ ಮರಳು ಪೂರೈಸುವಂತೆ ತಿಳಿಸಿ ಮರಳನ್ನು ಕೆಳಗಿಳಿಸುವಾಗ ಅವನನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ಅಬ್ದುಲ್ ರಹ್ಮಾನ್ ಅವರು ಕೆಲವು ದಿನಗಳ ಹಿಂದೆ ರೋಗಿಯೊಬ್ಬರ ಜೀವ ರಕ್ಷಿಸಲು ತನ್ನ ರಕ್ತವನ್ನೇ ಕೊಟ್ಟಿರುವ ವ್ಯಕ್ತಿಯಾಗಿದ್ದರು. ಯಾವುದೇ ಅಪರಾಧದ ಹಿನ್ನಲೆ ಇಲ್ಲದ ವ್ಯಕ್ತಿಯನ್ನು ಹಿಂದುತ್ವದ ಮದ ಹೊಂದಿರುವವರು ಕೊಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಜಾತ್ಯತೀತ ನಾಗರಿಕ ವೇದಿಕೆಯ ಸದಸ್ಯ ನಿಜಾಮೋದ್ದೀನ್, ಸೈಯದ್ ವಹೀದ್ ಲಖನ್, ಬಾಬುರಾವ್ ಹೊನ್ನಾ, ರಾಜಕುಮಾರ್ ಮೂಲಭಾರತಿ, ಉಮೇಶಕುಮಾರ್ ಸೊರಳ್ಳಿಕರ್, ಶ್ರೀಕಾಂತ್ ಸ್ವಾಮಿ, ಶಪಾಯತ್ ಅಲಿ, ಅರುಣ ಪಟೇಲ್, ರಾಜಕುಮಾರ್ ಗುನಳ್ಳಿ, ಅಂಬೇಡ್ಕರ್ ಬೌದ್ಧೆ, ಜಗನ್ನಾಥ್ ಹೊನ್ನಾ, ರಾಹುಲ್ ಡಾಂಗೆ, ಮಹಮ್ಮದ್ ಸೊಯೋಬುದ್ದೀನ್, ಸೈಯದ್ ಇಬ್ರಾಹಿಂ, ಶಫಿಯೋದ್ದೀನ್ ಗೋಲ್ಡ್, ಪ್ರಭು ಹೊಚಕನಳ್ಳಿ, ಮೌಲಾನಾ ಮನ್ನಾಖೇಳ್ಳಿ, ಪ್ರಭು ತಗಣಿಕರ್, ಚಾಂದೋಬಾ ಹಂದಿಕೇರಾ, ಪಾಂಡುರಂಗ್ ಪ್ಯಾಗೆ, ಸುನೀಲ್ ವರ್ಮಾ, ಬಾಬುರಾವ್ ಕೌಠಾ, ಜೈಶೀಲ್, ಸಾಯಿ ಶಿಂಧೆ ಹಾಗೂ ರಾಹುಲ್ ಹಾಲಹಿಪ್ಪರಗಾ ಇದ್ದರು.