Aurad | ಕಲೆಯ ಮೂಲಕ ಭಾವನೆಗಳನ್ನು ಅಭಿವ್ಯಕ್ತಿಸುವವನೇ ನಿಜವಾದ ಕಲಾವಿದ: ನಂದಾದೀಪ್ ಬೋರಾಳೆ
ಔರಾದ್: ಕಲೆಯನ್ನು ಕರಗತ ಮಾಡಿಕೊಂಡು ಚಿತ್ರಕಲೆಯ ಮೂಲಕ ಅದರಲ್ಲಿನ ಭಾವನೆಗಳನ್ನು ಇತರರಿಗೆ ಧಾರೆ ಎರೆಯುವವನೇ ನಿಜವಾದ ಕಲಾವಿದನಾಗಿ ಹೊರಹೊಮ್ಮುತ್ತಾನೆ ಎಂದು ಕರ್ನಾಟಕ ಪಬ್ಲಿಕ್ ಸಂಸ್ಥೆಯ ಕಾರ್ಯದರ್ಶಿ ನಂದಾದೀಪ್ ಬೋರಾಳೆ ಹೇಳಿದರು.
ತಾಲೂಕಿನ ಸಂತಪುರದ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಲಾವಿದ ಪ್ರಭು ಎಸ್. ವಾಸುದೇವ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಶೆಂಬೆಳ್ಳಿಯ ಬಡ ಕುಟುಂಬದ ಯುವಕ ಪ್ರಭು ಎಸ್. ವಾಸುದೇವ್ ಅವರು ತಮ್ಮ ಸಹಸ್ರಾರು ಕಲಾಕೃತಿಗಳ ಮೂಲಕ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕಲಾಕೃತಿಗಳ ಮೂಲಕ ಸಮಾಜದಲ್ಲಿ ವಿವಿಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿರುವ ಅವರು, ಅನೇಕ ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಅಳಿವಿನಂಚಿನಲ್ಲಿರುವ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಲು ಸಮಾಜದ ಎಲ್ಲರೂ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಮುಖ್ಯಗುರು ಮನೋಹರ ಬಿರಾದಾರ್ ಮಾತನಾಡಿ, ಪ್ರಭು ಎಸ್. ವಾಸುದೇವ್ ಅವರ ಕಲಾಕೃತಿಗಳಲ್ಲಿ ತಂತ್ರಗಾರಿಕೆಗೆ ವಿಶೇಷ ಮಹತ್ವ ನೀಡಲಾಗಿದೆ. ಅವರ ಚಿತ್ರಕಲಾ ಪ್ರದರ್ಶನದಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಹಲವು ಉಪಯುಕ್ತ ಮಾಹಿತಿಗಳು ದೊರೆತಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣಪತಿ ವಾಸುದೇವ್, ಸತೀಷ ನಾಗೂರೆ ಸೇರಿದಂತೆ ಇನ್ನಿತರರಿದ್ದರು. ಶಿಕ್ಷಕಿ ಸಂಗೀತಾ ಹೊಸಖಂಡೆ ಸ್ವಾಗತಿಸಿದರು. ರಾಜಶೇಖರ್ ಕುಶನೂರೆ ನಿರೂಪಿಸಿದರು.