ಹುಮನಾಬಾದ್ ಕರವೇ ತಾಲೂಕಾಧ್ಯಕ್ಷರಾಗಿ ಸಚಿನ್ ತಿಬ್ಶೆಟ್ಟಿ ನೇಮಕ
ಹುಮನಾಬಾದ್, ಆ.8: ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡರ ಬಣ) ಹುಮನಾಬಾದ್ ತಾಲೂಕು ಪದಾಧಿಕಾರಿಗಳ ನೇಮಕ ಸಮಾರಂಭವು ಶುಕ್ರವಾರ ಪಟ್ಟಣದ ಆದರ್ಶ ಹೋಟೆಲ್‌ನಲ್ಲಿ ನಡೆಯಿತು. ಸಮಾರಂಭದಲ್ಲಿ ಸಚಿನ್ ತಿಬ್ಶೆಟ್ಟಿ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಸೋಮನಾಥ್ ಮುಧೋಳ್, ಹುಮನಾಬಾದ್‌ನಲ್ಲಿ ನೂತನ ತಾಲೂಕು ಅಧ್ಯಕ್ಷರ ನೇಮಕದೊಂದಿಗೆ ಕನ್ನಡ ನಾಡು, ನುಡಿ ಹಾಗೂ ನೆಲ-ಜಲದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಹುಮನಾಬಾದ್‌ನಲ್ಲಿ ಜನಜೀವನಕ್ಕೆ ತೊಂದರೆ ಉಂಟುಮಾಡುತ್ತಿರುವ ಕೈಗಾರಿಕಾ ಪ್ರದೇಶದ ಸಮಸ್ಯೆಗಳ ವಿರುದ್ಧ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನೂತನ ತಾಲೂಕು ಅಧ್ಯಕ್ಷ ಸಚಿನ್ ತಿಬ್ಶೆಟ್ಟಿ ಮಾತನಾಡಿ, ಗುರುಗಂಗಾ ಅಭಿಯಾನಕ್ಕೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹೋರಾಟಗಾರರನ್ನು ಹುಮನಾಬಾದ್‌ಗೆ ಕರೆಸಿ ಗುರುಗಂಗಾ ಅಭಿಯಾನಕ್ಕೆ ಬೆಂಬಲವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸಿಹಿ ತಿನ್ನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಖಾದರ್ ಪಾಷಾ, ಬೀದರ್ ದಕ್ಷಿಣ ತಾಲೂಕಾಧ್ಯಕ್ಷ ವೀರಶೆಟ್ಟಿ, ಬಾಲ್ಕಿ ತಾಲೂಕಾಧ್ಯಕ್ಷ ಬಂಡೆಪ್ಪ ಕರ್ಸಣ್ಣ, ಮಲ್ಲಿಕಾರ್ಜುನ್ ಪ್ರಭಾ, ನಾಗಯ್ಯ ಸ್ವಾಮಿ, ಅನಿಲ್ ಚಿದ್ರಿ, ಶಂಕರ್, ನಾಗರಾಜ್ ಮರಪಳ್ಳಿ, ಮನೋಹರ್ ಕುಲಕರ್ಣಿ ಹಾಗೂ ವಿಜಯಕುಮಾರ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು