Bidar | ಅಲೆಮಾರಿ ಸಮುದಾಯಕ್ಕೆ ತಾತ್ಕಾಲಿಕ ವಸತಿ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ

Update: 2026-08-07 20:30 IST

ಬೀದರ್ : ನಗರದ ನೌಬಾದ್ ಸಮೀಪದ ಚೌಳಿಕಮಾನ ಪ್ರದೇಶದಲ್ಲಿ ಕಳೆದ 23 ವರ್ಷಗಳಿಂದ ಬೀದಿ ಬದಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದವರಿಗೆ ಬಾಗೆ ಕಾರಂಜಾ ಗ್ರಾಮದ ಸರ್ವೇ ನಂ.45/ಪೊ.2ರಲ್ಲಿರುವ ಒಂದು ಎಕರೆ ಸರ್ಕಾರಿ ಜಮೀನಿನಲ್ಲಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸಿಸಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಚೌಳಿಕಮಾನ ಸಮೀಪದ ಸಿಂದೋಳ್, ಮಾಂಗರವಾಡಿ ಹಾಗೂ ಕೋರವ ಜನಾಂಗದವರು ಹಲವು ವರ್ಷಗಳಿಂದ ವಿದ್ಯುತ್, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದಂತಹ ಮೂಲಸೌಕರ್ಯಗಳಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ವಾಸಿಸುತ್ತಿರುವ ಸ್ಥಳವು ಕೆಐಎಡಿಬಿ ಲೇಔಟ್ ಹಾಗೂ ಹನುಮಾನ್ ದೇವಸ್ಥಾನದ ಸಮೀಪ ಇರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಲಾಗಿದೆ.

ಬಾಗೆ ಕಾರಂಜಾ ಗ್ರಾಮದ ಸರ್ವೇ ನಂ.45/ಪೊ.2ರ ಸರ್ಕಾರಿ ಜಮೀನು ಅಲೆಮಾರಿ ಸಮುದಾಯದ ತಾತ್ಕಾಲಿಕ ವಸತಿಗೆ ಸೂಕ್ತವಾಗಿದೆ ಎಂದು ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಜಮೀನನ್ನು ಸಮತಟ್ಟುಗೊಳಿಸಿ, ವಿದ್ಯುತ್, ಕುಡಿಯುವ ನೀರು ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಸಂಬಂಧಿತ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

2023ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಮೂರು ತಿಂಗಳಲ್ಲಿ ಸರ್ಕಾರಿ ಜಮೀನು ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. 2024ರಿಂದ ಜಿಲ್ಲಾಧಿಕಾರಿಗೆ ಆರು ಬಾರಿ ಮನವಿ ಸಲ್ಲಿಸಲಾಗಿದ್ದು, 2025ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 13ರೊಳಗೆ ಜಮೀನನ್ನು ಸಮತಟ್ಟುಗೊಳಿಸಿ, ಆಗಸ್ಟ್ 15ರಂದು ರಾಷ್ಟ್ರಧ್ವಜಾರೋಹಣದೊಂದಿಗೆ ಅಲೆಮಾರಿ ಸಮುದಾಯದವರಿಗೆ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸಿಸಲು ಅವಕಾಶ ನೀಡಬೇಕು. ಅಲ್ಲದೆ, ಸಮುದಾಯದ ಜನರ ಪಟ್ಟಿಯನ್ನು ಸಿದ್ಧಪಡಿಸಿ, ಅವರಿಗೆ ತಾತ್ಕಾಲಿಕ ವಸತಿ, ವಿದ್ಯುತ್, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಜಿಲ್ಲಾಡಳಿತ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ವಿಶ್ವ ಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ‌ ಸೇರಿದಂತೆ ಅಲೆಮಾರಿ ಸಮುದಾಯದ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News