Bidar | ಭೂಮಾನಂದ್ ಹತ್ಯೆ ಖಂಡಿಸಿ ತನಿಖೆಗೆ ಬಿಎಸ್ಪಿ ಒತ್ತಾಯ

Update: 2026-08-07 18:27 IST

ಬೀದರ್, ಆ.8: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ್ ಗ್ರಾಮದ ಬಳಿ ಸಾಮಾಜಿಕ ಹೋರಾಟಗಾರ ಹಾಗೂ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖಂಡ ಭೂಮಾನಂದ್ (32) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಖಂಡಿಸಿ, ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಬಿಎಸ್ಪಿ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಭೂಮಾನಂದ್ ಅವರ ಕುಟುಂಬಕ್ಕೆ ನ್ಯಾಯ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಕರಣದ ಎಲ್ಲ ಆರೋಪಿಗಳನ್ನು ಯಾವುದೇ ರಾಜಕೀಯ ಅಥವಾ ಇತರ ಒತ್ತಡಗಳಿಗೆ ಮಣಿಯದೆ ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ, ಸಮಗ್ರ, ನಿಷ್ಪಕ್ಷಪಾತ ಹಾಗೂ ಪರಿಣಾಮಕಾರಿ ತನಿಖೆ ನಡೆಸುವ ಮೂಲಕ ಆರೋಪಿಗಳಿಗೆ ನ್ಯಾಯಾಲಯದಿಂದ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ, ರಾಜ್ಯ ಕಾರ್ಯದರ್ಶಿ ಅಶೋಕ್ ಮಂಠಾಳಕರ್, ಜಿಲ್ಲಾ ಸಂಯೋಜಕ ಜಾಫರ್ ಖುರೇಷಿ, ರಾಜಕುಮಾರ್ ಮೂಲಭಾರತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ್ ಭಾವಿದೊಡ್ಡಿ, ಬೀದರ್ ಉತ್ತರ ಅಧ್ಯಕ್ಷ ಮಹೇಶ್ ಭೋಲಾ, ಜಿಲ್ಲಾ ಕಾರ್ಯದರ್ಶಿ ಅಂಬಾದಾಸ್ ಚಕ್ರವರ್ತಿ, ಔರಾದ್ ತಾಲ್ಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಕೆ., ಹುಮನಾಬಾದ್ ತಾಲ್ಲೂಕಾಧ್ಯಕ್ಷ ವೈಜಿನಾಥ್ ಸಿಂಧೆ, ಭಾಲ್ಕಿ ತಾಲೂಕಾಧ್ಯಕ್ಷ ಆಕಾಶ್ ಶಿಂಧೆ, ಬಸವಕಲ್ಯಾಣ ಅಧ್ಯಕ್ಷ ಶಂಕರ ಫುಲೆ, ಶಶಿಕಾಂತ್ ಒಂಟೆ ಹಾಗೂ ಅಮರ್ ಜಲ್ದೆ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News