ಔರಾದ್ ತಹಶೀಲ್ದಾರ್ ಕಚೇರಿಗೆ ವಿವಿಧ ಇಲಾಖೆಗಳನ್ನು ವರ್ಗಾಯಿಸಲು ಆಗ್ರಹ
Update: 2025-12-21 19:27 IST
ಔರಾದ್ : ತಾಲೂಕಿನ ಸಂತಪೂರ ವಲಯದಲ್ಲಿರುವ ಪಿಡಬ್ಲ್ಯೂಡಿ, ಮೀನುಗಾರಿಗೆ, ಪ್ರಾದೇಶಿಕ ವಲಯ ಮತ್ತು ಸಾಮಾಜಿಕ ವಲಯ, ಅರಣ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳನ್ನು ತಾಲೂಕು ಕೆಂದ್ರವಾದ ಔರಾದ್ ಗೆ ವರ್ಗಾಯಿಸಬೇಕು ಎಂದು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದಿಂದ ಆಗ್ರಹಿಸಲಾಯಿತು.
ಔರಾದ್ ನ ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಔರಾದ್ ತಾಲೂಕಿನ ಎಲ್ಲ ಇಲಾಖೆಗಳ ಕಾರ್ಯಲಯಗಳು ಒಂದೇ ಸೂರಿನಲ್ಲಿರಬೇಕು ಎನ್ನುವ ಉದ್ದೇಶದಿಂದ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗಿದೆ. ತಾಲೂಕಿನ ಭಂಡರಕುಮಟಾ, ದಾಬಕಾ ಮುರ್ಕಿ, ಹೊಕ್ರಾಣ, ಸಾವರಗಾಂವ್, ಖೇರ್ಡಾ ಗ್ರಾಮಗಳ ಸಾರ್ವಜನಿಕರು ಸರ್ಕಾರಿ ಕೆಲಸಕ್ಕಾಗಿ ಔರಾದ್ ಗೆ ಬರುತ್ತಾರೆ. ಹಾಗಾಗಿ ಎಲ್ಲ ಕಚೇರಿಗಳು ಔರಾದ್ ಪಟ್ಟಣಕ್ಕೆ ವರ್ಗಾಯಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.