Aurad | ವಿಬಿ-ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಕುಟುಂಬಗಳ ಆರ್ಥಿಕ ಸಬಲೀಕರಣ: ಕಿರಣ ಪಾಟೀಲ್

Update: 2026-08-06 18:08 IST

ಔರಾದ್: ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸಿ, ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೊಂಡಿರುವ ವಿಬಿ-ಜಿ ರಾಮ್ ಜಿ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಹೇಳಿದರು.

ತಾಲೂಕಿನ ಧೂಪತಮಹಾಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ವಿಬಿ-ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಯೋಜನೆಯಡಿ ದಿನಗೂಲಿ ಮೊತ್ತವನ್ನು 370 ನಿಂದ 382 ರೂ. ಗೆ ಹೆಚ್ಚಿಸಲಾಗಿದೆ. ವಾರ್ಷಿಕ ಉದ್ಯೋಗಾವಕಾಶವನ್ನು 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಲಾಗಿದ್ದು, ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ಹೊಂದಿರುವ ಕುಟುಂಬವು ವರ್ಷಕ್ಕೆ 47,750 ರೂ. ರವರೆಗೆ ಆದಾಯ ಗಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಮಾತನಾಡಿ, ವಿಬಿ-ಜಿ ರಾಮ್ ಜಿ ಯೋಜನೆಯಡಿ 318 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಪ್ರತಿಯೊಬ್ಬ ಅರ್ಹ ಕುಟುಂಬವೂ ಜಾಬ್ ಕಾರ್ಡ್ ಹೊಂದಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಮೂಲಕ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

ಗ್ರಾಮಗಳಲ್ಲಿ ಹೆಚ್ಚಿನ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಿ, ಗ್ರಾಮೀಣ ಕುಟುಂಬಗಳ ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದಕಿಶೋರ್ ಶಾಸ್ತ್ರಿ, ತಾಂತ್ರಿಕ ಸಹಾಯಕ ಶರಣಪ್ಪ, ಡಿಇಒ ಪ್ರಕಾಶ್, ಗ್ರಾಮ ಕಾಯಕಮಿತ್ರ ಜಗದೇವಿ, ಎಂಬಿಕೆ ಉಷಾ ಹಾಗೂ ಐಇಸಿ ಸಂಯೋಜಕ ಅಂಬಾದಾಸ್ ಪಾಟೀಲ್ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News