Bidar| ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ವಿನಯ್ ಮಾಳಗೆ
ಬೀದರ್: ಪರಿಸರವು ಮನುಷ್ಯನ ಆರೋಗ್ಯ, ಆದಾಯ, ಆರ್ಥಿಕತೆ, ಕೃಷಿ ಸೇರಿದಂತೆ ಜೀವನದ ಎಲ್ಲ ಆಯಾಮಗಳನ್ನು ನಿರ್ಧರಿಸುವ ಪ್ರಮುಖ ಮಾಧ್ಯಮವಾಗಿದ್ದು, ಮಣ್ಣು, ನೀರು ಹಾಗೂ ಸಸ್ಯ ಸಂಪತ್ತಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಮಾಳಗೆ ಹೇಳಿದರು.
ಬಸವಕಲ್ಯಾಣ ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಣ ಮತ್ತು ಪರಿಸರದ ಅರಿವು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪರಿಸರದ ಬಗ್ಗೆ ಅರಿವು ಇಲ್ಲದೆ ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನಂಜುಂಡಪ್ಪ ವರದಿಯು ಕರ್ನಾಟಕದ ಭೌಗೋಳಿಕ ಸಮಸ್ಯೆಗಳನ್ನು ಗುರುತಿಸುವುದಷ್ಟೇ ಅಲ್ಲದೆ, ಅವುಗಳಿಗೆ ಪರಿಹಾರಗಳನ್ನೂ ಸೂಚಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚು ಹೊಂದಿರುವ ಬೀದರ್ ಜಿಲ್ಲೆಯಲ್ಲಿ ಕಾಡುಗಳನ್ನು ಸಂರಕ್ಷಿಸುವ ಜಾಗೃತಿ ಎಲ್ಲರಲ್ಲೂ ಮೂಡಬೇಕು ಎಂದು ಅವರು ತಿಳಿಸಿದರು.
ಮನೆಯ ಸುತ್ತಮುತ್ತ ಹಾಗೂ ಹೊಲದಲ್ಲಿರುವ ಪ್ರತಿಯೊಂದು ಮರ ಮತ್ತು ಗಿಡವೂ ಪರಿಸರದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮರಗಳ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗಿದ್ದು, ನೀರಿನ ಮೂಲಗಳನ್ನು ಸಂರಕ್ಷಿಸಿದಾಗ ಮಾತ್ರ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಮಾತನಾಡಿ, ಕಾಡು, ನೆಲ ಮತ್ತು ನೀರು ಪರಿಸರದ ಅಸ್ತಿತ್ವಕ್ಕೆ ಆಧಾರವಾಗಿವೆ. ಮನುಷ್ಯನ ದುರಾಸೆ ಹಾಗೂ ಪ್ರಕೃತಿಯ ಮೇಲಿನ ನಿರ್ಲಕ್ಷ್ಯದಿಂದಲೇ ಇಂದು ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲಕುಮಾರ್ ರಗಟೆ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕುರಕೋಟೆ, ಕಾರ್ಯದರ್ಶಿ ಅಶೋಕಕುಮಾರ್ ನಾಗರಾಳೆ, ನಿರ್ದೇಶಕ ವೀರಣ್ಣ ಹಲಶೆಟ್ಟೆ, ಪತ್ರಕರ್ತ ಬಾಲಾಜಿ ಕುಂಬಾರ್, ಪರಿಸರವಾದಿ ಹರ್ಷವರ್ಧನ್ ರಾಠೋಡ್, ಸಂದೀಪ್ ಮುಕಿಂದೆ, ಬಸವೇಶ್ವರ್ ಪಿಯು ಕಾಲೇಜು ಪ್ರಾಚಾರ್ಯ ಡಾ. ರುದ್ರಮಣಿ ಮಠಪತಿ, ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ್, ಐಕ್ಯುಎಸಿ ಸಂಯೋಜಕ ಪವನಕುಮಾರ್ ಪಾಟೀಲ್, ಪ್ರಿಯಾ ಚೌಹಾಣ್, ನಾಗವೇಣಿ ಬಿರಾದಾರ್, ಎಂ.ಡಿ. ಜಬಿ, ವೀರೇಶ್ ಸ್ವಾಮಿ, ಗಂಗಾಧರ್ ಸಾಲಿಮಠ್, ನಾಗರಾಜ್ ನಾಸೆ, ಐಶ್ವರ್ಯಾ ಖರೋಣೆ, ಡಾ. ಬಸವರಾಜ್ ಖಂಡಾಳೆ ಹಾಗೂ ವಿವೇಕಾನಂದ್ ಶಿಂಧೆ ಸೇರಿದಂತೆ ಇತರರು ಇದ್ದರು.