ಹುಮನಾಬಾದ್ | ಹೊಂದಾಣಿಕೆ ರಾಜಕಾರಣ ಬಿಟ್ಟು ಅಧಿಕಾರಿಗಳಿಗೆ ದಿಟ್ಟವಾಗಿ ಪ್ರಶ್ನಿಸಿ : ಮಾಜಿ ಸಚಿವ ರಾಜಶೇಖರ ಪಾಟೀಲ್

Update: 2026-08-06 18:05 IST

ಹುಮನಾಬಾದ್: ನೂತನವಾಗಿ ಆಯ್ಕೆಯಾದ ಕೆಡಿಪಿ ಸದಸ್ಯರು ಸಾರ್ವಜನಿಕರ ದನಿಯಾಗಿ ಅಧಿಕಾರಿಗಳನ್ನು ಪ್ರಶ್ನಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ಹೊಂದಾಣಿಕೆ ರಾಜಕಾರಣ ಬಿಟ್ಟು ಮುಂಬರುವ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಕರೆ ನೀಡಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ನೂತನ ಕೆಡಿಪಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸುವ ಅಧಿಕಾರ ಸದಸ್ಯರಿಗೆ ಇದೆ. ಸಭೆಗೆ ಮುನ್ನ ನೀಡಲಾಗುವ ವಿಷಯಗಳ ಕಿರುಹೊತ್ತಿಗೆಯನ್ನು (ಬುಕ್‌ಲೆಟ್) ಅಧ್ಯಯನ ಮಾಡಿ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಬೇಕು. ಸರ್ಕಾರ ನಿಮ್ಮ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದೆ ಎಂದು ಹೇಳಿದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಕೆಡಿಪಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಶಾಸಕರು ಸಭೆಯಿಂದ ಹೊರನಡೆದ ಉದಾಹರಣೆಯೂ ಇದೆ. ಆದ್ದರಿಂದ ಸದಸ್ಯರು ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ತಮ್ಮ ಗ್ರಾಮಗಳಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಸಿದ್ದು ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ರಾಜಶೇಖರ್ ಪಾಟೀಲ್, ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಮಾಲಿನ್ಯಮುಕ್ತ ಕ್ಷೇತ್ರ ನಿರ್ಮಾಣ, ಸಕ್ಕರೆ ಕಾರ್ಖಾನೆ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ನೀಡಿದ್ದ ಭರವಸೆಗಳನ್ನು ಶಾಸಕರು ಈಡೇರಿಸಿಲ್ಲ ಎಂದು ಆರೋಪಿಸಿದರು.

ಪಟ್ಟಣದ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಗುರುಗಂಗಾ ನದಿಯ ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದು, ಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರು ಹೊಂದಾಣಿಕೆ ರಾಜಕಾರಣ ಮಾಡಬಾರದು. ಪಕ್ಷವೇ ನಮಗೆ ತಾಯಿ ಸಮಾನ. ಮುಂಬರುವ ಚುನಾವಣೆ ಯುದ್ಧದಂತಿದ್ದು, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಸರ್ಕಾರ ಮತ್ತು ಪಕ್ಷ ಸೂಕ್ತ ಅವಕಾಶ ನೀಡುತ್ತದೆ. ಜವಾಬ್ದಾರಿ ಪಡೆದು ಕೆಲಸ ಮಾಡದವರಿಂದ ರಾಜೀನಾಮೆ ಪಡೆದು ಬೇರೆಯವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಗಸ್ಟ್ 15ರಿಂದ 20ರೊಳಗೆ ಜಿಲ್ಲಾ ಕೆಡಿಪಿಗೆ ಒಬ್ಬ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗುವುದು. ಸರ್ಕಾರದ ಮೀಸಲಾತಿ ಮಾರ್ಗಸೂಚಿಯಂತೆ ಅವಕಾಶ ಕಲ್ಪಿಸಲಾಗುತ್ತದೆ. ಅವಕಾಶ ಸಿಗದವರು ಬೇಸರಪಡುವ ಅಗತ್ಯವಿಲ್ಲ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮಿಯಾ, ಗ್ರಾಮೀಣ ಅಧ್ಯಕ್ಷ ಓಂಕಾರ್ ತುಂಬಾ, ಗ್ರಾಮೀಣ ಯುವ ಅಧ್ಯಕ್ಷ ರಾಹಿಲ್ ಖಿಲ್ಜಿ ಹಾಗೂ ರೇವಣ್ಣಸಿದ್ದಪ್ಪ ಪಾಟೀಲ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News