×
Ad

ಔರಾದ್ | ಅಪೌಷ್ಟಿಕತೆ ತಡೆಯಲು ಮಕ್ಕಳಲ್ಲಿ ನೈರ್ಮಲ್ಯ ಜಾಗೃತಿ ಅವಶ್ಯಕ : ತಹಶೀಲ್ದಾರ್ ಮಹೇಶ್ ಪಾಟೀಲ್

Update: 2025-08-21 19:11 IST

ಔರಾದ್ : ಆರೋಗ್ಯಕರ ಬೆಳವಣಿಗೆ ರೂಢಿಸಿಕೊಂಡು ಅಪೌಷ್ಟಿಕತೆ ತಡೆಯಲು ಮಕ್ಕಳಲ್ಲಿ ನೈರ್ಮಲ್ಯ ಮತ್ತು ಪರಿಸರ ಜಾಗೃತಿ ಅತ್ಯಾವಶ್ಯಕ ಎಂದು ತಹಶೀಲ್ದಾರ್ ಮಹೇಶ್ ಪಾಟೀಲ್ ಅವರು ಅಭಿಪ್ರಾಯಪಟ್ಟರು.

ಇಂದು ಎಕಲಾರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ, ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ವಾಟರ್‌ಶೆಡ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಚ್ಛತೆ ಬಗ್ಗೆ ನಾಟಕ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳಲ್ಲಿ ಶುಚಿತ್ವದ ಕುರಿತು ತಿಳಿವಳಿಕೆ ಮೂಡಿಸಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಬಯಲು ಶೌಚಮುಕ್ತ ಗ್ರಾಮಗಳೆಂದು ಘೋಷಣೆಗಳಾಗಿದ್ದರೂ ಕೂಡ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನವಾಗುತ್ತಿಲ್ಲ. ಸ್ವಚ್ಛತೆ ನಮ್ಮ ಬದುಕಿನ ಭಾಗವಾಗಬೇಕು. ಯಾವುದೇ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯ ನಿರಂತರ ಸ್ವಚ್ಛತೆ, ನೀರಿನ ಮಿತ ಬಳಕೆಯ ಕುರಿತು ಕಾಳಜಿವಹಿಸಬೇಕು. ಅಂತರ್ಜಲ ಸಂರಕ್ಷಿಸುವ ನಿಟ್ಟಿನಲ್ಲಿ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ರಾಜೇಂದ್ರ ಮಾಳಿ ಅವರು ಮಾತನಾಡಿ, ನೀರು ನಮಗೆ ದೊರೆತ ಅತ್ಯಮೂಲ್ಯ ಆಸ್ತಿಯಾಗಿದ್ದು, ಅದನ್ನು ಸಂರಕ್ಷಿಸಲು ವಾಟರ್ ಶೆಡ್ ಸಂಸ್ಥೆಯ ಯೋಜನೆಗಳು ತುಂಬ ಉಪಯುಕ್ತವಾಗಿವೆ. ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಪರಿಸರ ಸ್ವಚ್ಛವಾಗಿಡುವುದು ಅತಿ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಬಸವಕಲ್ಯಾಣದ ಜೈ ಭವಾನಿ ಕಲೆ ಮತ್ತು ಸಾಂಸ್ಕೃತಿಕ ಮಹಿಳಾ ಸಂಘದ ವಿಜಯಲಕ್ಷ್ಮಿ, ಡಿಲೆಮಾ ಅಣದೂರ, ಮಧುಕರ ಘೋಡಕೆ, ಯೇಸುದಾಸ್ ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತೆ ಜಾಗೃತಿ, ಬಯಲು ಬಹಿರ್ದೆಸೆ ಸಂಬಂಧಿತ ಕಿರು ನಾಟಕಗಳು ಮಕ್ಕಳ ಮನಸೂರೆಗೊಂಡವು.

ಈ ಸಂದರ್ಭದಲ್ಲಿ ತಾಲೂಕು ಯೋಜನಾ ವ್ಯವಸ್ಥಾಪಕ ಸಿದ್ದಪ್ಪ ಭಾಲ್ಕೆ, ಕರ್ನಾಟಕ ಪ್ರಾದೇಶಿಕ ವ್ಯವಸ್ಥಾಪಕ ರಣಧೀರ್ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಧನರಾಜ್ ಪಿಟ್ರೆ, ಜಗದೀಶ್ ಪಾಟೀಲ್, ರಿಷಿಕೇಶ್ ಶಿಂದೆ, ರವಿಕುಮಾರ್ ಮಠಪತಿ, ಕಂದಾಯ ನೀರಿಕ್ಷಕ ನರಸಿಮ್ಲು, ಸಿಆರ್‌ಪಿ ಮಹಾದೇವ್ ಘುಳೆ, ಕಲ್ಪನಾ ಪಾಟೀಲ್, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ಅಂಕುಶ್ ಪಾಟೀಲ್, ರೂಪಾ, ಸಬೀತಾ, ಕಾವೇರಿ ಹಾಗೂ ಸುರೇಖಾ ಸೇರಿದಂತೆ ಶಾಲಾ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News