ಬೀದರ್: ಜ್ಞಾನಕ್ಕಿಂತ ಶ್ರೇಷ್ಠವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ಕೇವಲ ಪಠ್ಯಕ್ರಮ ಬೋಧಿಸುವವರು ಮಾತ್ರ ಶಿಕ್ಷಕರಲ್ಲ; ಯಾವುದೇ ವಿಷಯದ ಕುರಿತು ಜ್ಞಾನ ನೀಡುವವರನ್ನು ಗುರುಗಳೆಂದು ಕರೆಯಲಾಗುತ್ತದೆ. ಶಿಕ್ಷಕರನ್ನು ದೈಹಿಕ ಸಾಮರ್ಥ್ಯದಿಂದ ಅಳೆಯಲು ಸಾಧ್ಯವಿಲ್ಲ, ಅವರಲ್ಲಿರುವ ಜ್ಞಾನದಿಂದಲೇ ಅಳೆಯಬೇಕು ಎಂದು ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸುರೇಶ್ ಪಾಟೀಲ್ ಹೇಳಿದರು.

ಬೀದರ್ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಶನಿವಾರ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮನ್ನು ಹೊತ್ತು ಬೆಳೆಸಿ, ಉತ್ತಮ ಸಂಸ್ಕಾರ ನೀಡಿ ಉನ್ನತ ಹುದ್ದೆಗೇರಲು ಕಾರಣರಾದ ತಂದೆ-ತಾಯಿಯರೂ ನಿಜವಾದ ಗುರುಗಳಾಗಿದ್ದಾರೆ. ಕೇವಲ ಒಂದು ದಿನ ಶಿಕ್ಷಕರ ದಿನಾಚರಣೆ ಆಚರಿಸಿದರೆ ಸಾಲದು. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದಾಗ ಮಾತ್ರ ತಂದೆ-ತಾಯಿ ಹಾಗೂ ಗುರುವಿನ ಋಣ ತೀರಿಸಿದಂತಾಗುತ್ತದೆ ಎಂದರು.

ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಕಡುಬಡತನದ ಕುಟುಂಬದಲ್ಲಿ ಬೆಳೆದು, ಕಠಿಣ ಪರಿಶ್ರಮ ಹಾಗೂ ಗುರುಗಳ ಮಾರ್ಗದರ್ಶನದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದರು. ತಮ್ಮ ಆದರ್ಶ ಹಾಗೂ ಸಾಧನೆಯ ಮೂಲಕ ಇಡೀ ಜಗತ್ತಿಗೆ ಮಾದರಿಯಾದರು ಎಂದು ಹೇಳಿದರು.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅವರ ತತ್ವಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಕರ ದಿನಾಚರಣೆಯ ಆಚರಣೆಗೆ ಸಾರ್ಥಕತೆ ದೊರೆಯುತ್ತದೆ. ಶಿಕ್ಷಕರ ಕರ್ತವ್ಯ ಕೇವಲ ಪಾಠ ಬೋಧಿಸುವುದಕ್ಕೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುವಂತೆ ರೂಪಿಸುವುದು ಹಾಗೂ ಉತ್ತಮ ಸಂಸ್ಕಾರ ನೀಡುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರವಾಗಿದ್ದು, ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ, ಸಂಸ್ಕಾರ ಕೆಡಲು ಬಿಡುವುದಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಅಧಿಕಾರಿ ಹಾಗೂ ಸಹ ಪ್ರಾಧ್ಯಾಪಕ ಡಾ. ವಿಜಯ ಮಹಾಂತೇಶ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿಷಯಗಳನ್ನು ಸವಾಲಾಗಿ ಸ್ವೀಕರಿಸಿ ಪರಿಶ್ರಮಪಟ್ಟರೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ವ್ಯಕ್ತಿಯೊಬ್ಬರು ಅತ್ಯುನ್ನತ ಸ್ಥಾನಕ್ಕೇರಲು ತಂದೆ-ತಾಯಿ ಹಾಗೂ ಗುರುಗಳು ನೀಡುವ ಜ್ಞಾನ ಮತ್ತು ಸಂಸ್ಕಾರ ಪ್ರಮುಖ ಕಾರಣವಾಗುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ನಾಗೇಂದ್ರ ಕವಳೆ, ಡಾ.ಶ್ರೀನಿವಾಸ್ ಎನ್., ಸಹಾಯಕ ಪ್ರಾಧ್ಯಾಪಕ ಡಾ. ಅರವಿಂದಕುಮಾರ್, ಜಾನ್ಹವಿ ಡಿ.ಆರ್., ಅನುರಾಧಾ, ಉಪ ಗ್ರಂಥಪಾಲಕ ಏಕನಾಥ್ ನಿಂಗಪ್ಪ, ಡಾ.ಪ್ರಿಯಾಂಕಾ ಮುಳಗೆ, ಡಾ. ದೀಪಾ ಮುಸ್ಕೆ, ವಿದ್ಯಾರ್ಥಿನಿಯರಾದ ಮಧುಮತಿ ಹಾಗೂ ಮಹೇಶ್ವರಿ ಸೇರಿದಂತೆ ಮಹಾವಿದ್ಯಾಲಯದ ಎಲ್ಲ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor