ಔರಾದ್ | ಶಿಕ್ಷಕರ ದಿನಾಚರಣೆಯ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪ : ಶಾಸಕ ಪ್ರಭು ಚೌವ್ಹಾಣ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಔರಾದ್ : ಶಾಲಾ ಶಿಕ್ಷಣ ಇಲಾಖೆ ಔರಾದ್ (ಬಿ), ತಾಲೂಕು ಪಂಚಾಯತ್ ವತಿಯಿಂದ ಇಂದು ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದ ಸಭಾಂಗಣದಲ್ಲಿಯೇ ಶಾಸಕ ಪ್ರಭು ಚೌವ್ಹಾಣ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ದಿಢೀರ್ ಪ್ರತಿಭಟನೆ ನಡೆಸಿದರು.
ಬ್ಯಾನರ್ ಮೇಲೆ ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಫೋಟೋಗಳು ಹಾಕದೆ ಕೇವಲ ಶಾಸಕರ ಫೋಟೋ ಹಾಕಲಾಗಿದೆ. ಈ ಮೂಲಕ ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರ್ಯಕ್ರಮದ ವೇದಿಕೆ ಮೇಲೆಯೇ ಶಾಸಕ ಪ್ರಭು ಚೌವ್ಹಾಣ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಗೌರವ ತೋರಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ಬ್ಯಾನರ್ ಅನ್ನು ತಕ್ಷಣವೇ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಮಯದಲ್ಲಿ ಶಾಸಕ ಪ್ರಭು ಚೌವ್ಹಾಣ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಈ ವೇಳೆ ಪೊಲೀಸರು ಮದ್ಯ ಪ್ರವೇಶಿಸಿ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕೊಳ್ಳುರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಚಂದು ಡಿಕೆ, ರಾಜು ಮುದಾಳೆ, ಮಾರುತಿ ಸುರ್ಯವಂಶಿ, ಆನಂದ್ ಕಾಂಬಳೆ, ರತ್ನದೀಪ್ ಕಸ್ತೂರೆ, ರಾಹುಲ್ ಜಾಧವ್, ಅನೀಲ್ ಒಡೆಯರ್ ಹಾಗೂ ಸೂರ್ಯಕಾಂತ್ ಕಾಂಬಳೆ ಎನ್ನುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.