ಬಸವಕಲ್ಯಾಣ | ಆರೆಸ್ಸೆಸ್ ಪಥ ಸಂಚಲನದಲ್ಲಿ ಪ್ರಾಂಶುಪಾಲ, ಪಶು ವೈದ್ಯಾಧಿಕಾರಿ, ಶಿಕ್ಷಕರು ಭಾಗಿ; ಅಮಾನತುಗೊಳಿಸಲು ಆಗ್ರಹ
ಬೀದರ್ : ಇತ್ತೀಚಿಗೆ ಬಸವಕಲ್ಯಾಣ ನಗರದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಪ್ರಾಂಶುಪಾಲ, ಪಶು ವೈದ್ಯಾಧಿಕಾರಿ ಹಾಗೂ ಶಿಕ್ಷಕರು ಭಾಗವಹಿಸಿದ್ದು, ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಡಿಎಸ್ಎಸ್ ತಾಲೂಕು ಅಧ್ಯಕ್ಷ ಮಹಾದೇವ್ ಗಾಯಕವಾಡ್ ಅವರು ಆಗ್ರಹಿಸಿದ್ದಾರೆ.
ನಿಲಾಂಬಿಕಾ ಸರಕಾರಿ ಕಾಲೇಜಿನ ಪ್ರಾಂಶುಪಾಲ ಆಶೊಕ್ ರೆಡ್ಡಿ, ಪಶು ವೈದ್ಯಾಧಿಕಾರಿ ಆನಂದ್ ಪಾಟೀಲ್, ಕಿಟ್ಟಾ ಗ್ರಾಮದ ಸರಕಾರಿ ಹಿರಿಯ ಪ್ರೌಢ ಶಾಲೆಯ ಮುಖ್ಯಗುರು ಸೋಮನಾಥ್ ಬೇಲೂರೆ ಹಾಗೂ ರಾಜೀವ್ ಗಾಂಧಿ ಪಿಯು ಕಾಲೇಜಿನ ಉಪನ್ಯಾಸಕ ರುದ್ರೇಶ್ ಅವರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾದ ಸರಕಾರಿ ನೌಕರರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಮೇಲಿನ ಎಲ್ಲ ಸರಕಾರಿ ನೌಕರರು ಬಸವಕಲ್ಯಾಣದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾಗಿ, ಸಂಘಕ್ಕೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಸರಕಾರದ ವೇತನ ಪಡೆದುಕೊಂಡು ಒಂದು ಸಂಘಕ್ಕೆ ಬೆಂಬಲ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.