Bidar | ಶಾಸಕ ಪ್ರಭು ಚವ್ಹಾಣ್ ವಿರುದ್ಧ ಆಧಾರರಹಿತ ಆರೋಪ: ದೀಪಕ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಎಚ್ಚರಿಕೆ
ಬೀದರ್: ಔರಾದ್ ಶಾಸಕ ಪ್ರಭು ಚವ್ಹಾಣ್ ಅವರ ಘನತೆ ಮತ್ತು ಗೌರವಕ್ಕೆ ಪದೇಪದೇ ಧಕ್ಕೆ ತರುವ ಉದ್ದೇಶದಿಂದ ಅಸತ್ಯ ಹಾಗೂ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವ ಚಾಂದೋರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸುಜಿತ್ ರಾಠೋಡ್ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಬೀದರ್ ಸಮೀಪದ ಕೊಳಾರ್ ಗ್ರಾಮದ ಬಳಿಯ ಜಮೀನಿಗೆ ಸಂಬಂಧಿಸಿದಂತೆ ಶಾಸಕರು ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ಖಂಡನೀಯವಾಗಿದೆ. ಈ ಜಮೀನಿನ ಖರೀದಿ ವ್ಯವಹಾರ 2007ರಲ್ಲಿಯೇ ಆರಂಭವಾಗಿದ್ದು, 2008ರಲ್ಲಿ ಖರೀದಿಸಲಾಗಿದೆ. ಈ ಜಮೀನು 1954ರಿಂದಲೂ ಪಟ್ಟಾ ಜಮೀನಾಗಿದ್ದು, ಈ ಹಿಂದೆ ಏಳರಿಂದ ಎಂಟು ಜನರು ಮಾಲೀಕತ್ವ ಹೊಂದಿದ್ದರು. ನಂತರ ಶಾಸಕರು ಅದನ್ನು ಖರೀದಿಸಿದ್ದಾರೆ. ಖರೀದಿ ವ್ಯವಹಾರದ ಸಂದರ್ಭದಲ್ಲಿ ಅವರು ಶಾಸಕರಾಗಿರಲಿಲ್ಲ. ಹೀಗಿರುವಾಗ ಅಧಿಕಾರ ದುರ್ಬಳಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶಾಸಕರ ಹೆಸರಿಗೆ ಮಸಿ ಬಳಿಯುವ ಏಕೈಕ ಉದ್ದೇಶದಿಂದ ಇದನ್ನು ಭೂ ಕಬಳಿಕೆ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಜಮೀನುಗಳಿಗೆ ಸಂಬಂಧಿಸಿದಂತೆ ಸಾವಿರಾರು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಪಹಣಿ ಹಾಗೂ ಇತರ ಜಮೀನು ದಾಖಲೆಗಳಲ್ಲಿನ ಲೋಪದೋಷಗಳಿಂದ ಅನೇಕ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ದಾಖಲೆಗಳ ನಿರ್ವಹಣೆಯಲ್ಲಿ ತಪ್ಪುಗಳಿದ್ದ ಮಾತ್ರಕ್ಕೆ ಜಮೀನಿನ ಮಾಲೀಕರು ಅಪರಾಧಿಗಳಾಗುವುದಿಲ್ಲ. ಈ ಜಮೀನಿಗೆ ಸಂಬಂಧಿಸಿದ 1954-55ನೇ ಸಾಲಿನ ಖಾಸ್ರಾ ಪಹಣಿ, ಪಕ್ಕಾ ಪುಸ್ತಕ, ಪ್ರತಿ ಪುಸ್ತಕ ಹಾಗೂ ಹೊಸ ಪಹಣಿಗಳನ್ನು ಸಲ್ಲಿಸಲು ಸಿದ್ಧರಿದ್ದೇವೆ. ಜನರಿಗೆ ಎಲ್ಲವೂ ತಿಳಿದಿದ್ದು, ಇಂತಹ ಪ್ರಯತ್ನಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ಜಮೀನಿಗೆ ಸಂಬಂಧಿಸಿದಂತೆ ಈ ಹಿಂದೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಬ್ಲ್ಯಾಕ್ಮೇಲ್ ಮಾಡುವ ಮೂಲಕ ಇಡೀ ಪಹಣಿಯನ್ನೇ ತೆಗೆಸುವ ಪ್ರಯತ್ನ ಮಾಡಲಾಗಿತ್ತು. ಹೈಕೋರ್ಟ್ ಸರಿಪಡಿಸಲು ನಿರ್ದೇಶನ ನೀಡಿದ ಬಳಿಕ ಅದನ್ನು ಸರಿಪಡಿಸಲಾಯಿತು. ಈ ವ್ಯಕ್ತಿ ಶಾಸಕರ ವಿರುದ್ಧ ಹಲವು ದೂರುಗಳನ್ನು ಸಲ್ಲಿಸಿದ್ದಾರೆ. ತಾವೇ ಕೆಲವು ದೂರುಗಳನ್ನು ನೀಡಿದರೆ, ತಮ್ಮ ಗುಂಪಿನವರಿಂದಲೂ ಇನ್ನು ಕೆಲವು ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದೀಪಕ್ ಪಾಟೀಲ್ ಅವರ ಹಿಂದಿನ ನಡೆಗಳು ಅಕ್ರಮ, ಮೋಸ ಮತ್ತು ವಂಚನೆಯಿಂದ ಕೂಡಿವೆ. ಎಲ್ಲೆಲ್ಲಿ ಹೋಗಿದ್ದಾರೋ ಅಲ್ಲೆಲ್ಲ ವಿಶ್ವಾಸದ್ರೋಹದ ಕೆಲಸ ಮಾಡಿದ್ದಾರೆ. ಶಾಸಕ ಪ್ರಭು ಚವ್ಹಾಣ ಅವರೊಂದಿಗೂ ಗುರುತಿಸಿಕೊಂಡು, ಅವರಿಂದ ಸಾಕಷ್ಟು ಪ್ರಯೋಜನ ಪಡೆದು, ಬಳಿಕ ಅವರ ವಿರುದ್ಧವೇ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ರಾಜಕೀಯ ಅಥವಾ ವೈಯಕ್ತಿಕ ದ್ವೇಷದಿಂದ ಆಧಾರರಹಿತ ಆರೋಪಗಳನ್ನು ಮಾಡಿ ಶಾಸಕ ಪ್ರಭು ಚವ್ಹಾಣ ಅವರ ಘನತೆಗೆ ಧಕ್ಕೆ ತರುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ. ಅವರ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ತರುವವರ ವಿರುದ್ಧ ಕಾನೂನುಬದ್ಧ ಹೋರಾಟ ನಡೆಸಲಾಗುವುದು. ಮಾನಹಾನಿ ಹಾಗೂ ನಷ್ಟ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸುಜಿತ್ ರಾಠೋಡ್ ಸ್ಪಷ್ಟಪಡಿಸಿದ್ದಾರೆ.