ಬೀದರ್: ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ದಲಿತರು, ಒಬಿಸಿ, ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯಗಳ ಜನರು ಒಗ್ಗೂಡಿ ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕು. ಪಕ್ಷ ಹಾಗೂ ಧರ್ಮಗಳನ್ನು ಬದಿಗಿಟ್ಟು ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಬೇಕು. ಮುಂದಿನ ಪೀಳಿಗೆಗೆ ಸಮಾನತೆಯ ಸಮಾಜವನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ಲಿಮಿಟೆಡ್‌ನ ನಿರ್ದೇಶಕ ಅನೀಲಕುಮಾರ್ ಬೆಲ್ದಾರ್ ಹೇಳಿದರು.

ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ಅಂಗೀಕಾರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಮತ್ತು ನ್ಯಾಯ ಒದಗಿಸುವ ಮಹತ್ವದ ಗ್ರಂಥವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸಂವಿಧಾನವನ್ನು ಓದುವ ಮೂಲಕ ಅದರ ಆಶಯ ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಒಳಮೀಸಲಾತಿ ಮೂಲಕ ಅಣ್ಣ-ತಮ್ಮಂದಿರ ನಡುವೆ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಈ ವಿಚಾರವನ್ನು ಇಲ್ಲಿಯೇ ಬಿಟ್ಟು, ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರೂ ಒಂದಾಗಿ ಮುನ್ನಡೆಯಬೇಕು. ಇಲ್ಲದಿದ್ದರೆ ನಮಗೂ, ನಿಮಗೂ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಶಾಸಕ ರಹೀಂ ಖಾನ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಸಂವಿಧಾನ ಇಲ್ಲದಿದ್ದರೆ ನಾವು ಪ್ರಾಣಿಗಳಂತೆ ಬದುಕಬೇಕಾಗುತ್ತಿತ್ತು. ತಲೆ ಎತ್ತಿ ಬದುಕುವುದೂ ಕಷ್ಟವಾಗುತ್ತಿತ್ತು ಎಂದು ಹೇಳಿದರು.

ಸಂವಿಧಾನ ಜಾರಿಗೆ ಬರುವುದಕ್ಕೂ ಮೊದಲು ದಲಿತರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿತ್ತು. ಇದೀಗ ಸಂವಿಧಾನ ಜಾರಿಯಾದರೂ ಕೆಲವು ಕಡೆ ದಲಿತರ ಮೇಲೆ ಅನ್ಯಾಯ ನಡೆಯುತ್ತಿದೆ. ಆಹಾರದ ಹೆಸರಿನಲ್ಲಿಯೂ ದಾಳಿ ಮಾಡಲಾಗುತ್ತಿದೆ. ಇಂದಿಗೂ ಬಡವರು ಭಯದಿಂದ ಬದುಕುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನವು ಸಾಮಾನ್ಯ ಜನರಿಗೂ ಹಕ್ಕುಗಳನ್ನು ನೀಡಿದೆ. ಡಾ. ಅಂಬೇಡ್ಕರ್ ಅವರು ಬಡವರ ಪರವಾಗಿ ಹೋರಾಟ ನಡೆಸಿದ್ದಾರೆ ಎಂದರು.

ಭಂತೆ ಧಮ್ಮಜ್ಯೋತಿ ಮಾತನಾಡಿ, ಹುಟ್ಟಿನಿಂದ ಸಾಯುವವರೆಗೂ ಸಂವಿಧಾನ ಅತ್ಯವಶ್ಯಕವಾಗಿದೆ. ಮರಣದ ನಂತರ ಮರಣ ಪ್ರಮಾಣಪತ್ರ ಪಡೆಯುವುದಕ್ಕೂ ಸಂವಿಧಾನದ ಆಶಯಗಳು ಅಗತ್ಯವಾಗಿವೆ ಎಂದರು.

ಈ ಸಂದರ್ಭದಲ್ಲಿ ಸಚಿನ್ ನಾಗವಂಶಿ ಅವರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುಭಾಷ್ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಬುಡಾ ಅಧ್ಯಕ್ಷ ವಿನೋದ್ ಅಪ್ಪೆ, ಬಾಬುರಾವ್ ಪಾಸ್ವಾನ್, ವಿಠಲದಾಸ್ ಪ್ಯಾಗೆ, ಬಸವರಾಜ್ ಧನ್ನೂರ್, ಅಮೃತರಾವ್ ಚಿಮಕೋಡೆ, ಶಿವಕುಮಾರ್ ನೀಲಿಕಟ್ಟಿ, ಶ್ರೀಪತರಾವ್ ದೀನೆ, ಶೇಷರಾವ್ ಬೆಳಕುಣಿಕರ್, ಅಂಬಾದಾಸ್ ಗಾಯಕವಾಡ್, ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ್ ಸೋನಾರೆ, ರಾಜಕುಮಾರ್ ಹೆಬ್ಬಾಳೆ, ಶಿವಕುಮಾರ್ ಮೇತ್ರೆ, ಸಂಜಯ್ ಜಾಗೀರದಾರ್, ಕಾಶೀನಾಥ್ ಚಲ್ವಾ, ಸಾಯಿ ಸಿಂಧೆ, ಬಸವರಾಜ್ ಮಾಳಗೆ ಹಾಗೂ ಲುಂಬಿನಿ ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರದೀಪ್ ನಾಟೆಕರ್ ನಿರೂಪಿಸಿದರು. ಸಾಹಿತಿ ರಮೇಶ್ ಬಾಬು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ/ವಾರ್ತಾಭಾರತಿ

ಬೀದರ್ ಜಿಲ್ಲಾ ವರದಿಗಾರರು

ಚಿತ್ರಶೇನ ವ್ಹಿ. ಫುಲೆ ಅವರು 2023ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಿಂದ ವಾರ್ತಾಭಾರತಿ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ