ಭಾಲ್ಕಿ | ಜೀವನದಲ್ಲಿ ಉತ್ಸಾಹ ಹೆಚ್ಚಿಸಲು ಕ್ರೀಡೆಗಳು ಪೂರಕ : ಗುರುಬಸವ ಪಟ್ಟದೇವರು
ಭಾಲ್ಕಿ : ಮಕ್ಕಳ ಭವಿಷ್ಯದ ಸಾಧನೆಗೆ ಕ್ರೀಡೆಗಳು ಮೆಟ್ಟಿಲಾಗುತ್ತವೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಉತ್ಸಾಹ, ಉಲ್ಲಾಸ, ಹುಮ್ಮಸ್ಸು ಹೆಚ್ಚಿಸುತ್ತದೆ ಎಂದು ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪರಿಸರದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅವರ ಅಮೃತ ಮಹೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ಶಾಲಾ ಅಂತರ್ಗತ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕತೆಯ ಮಕ್ಕಳಲ್ಲಿ ಬುದ್ದಿಮಟ್ಟ ಹೆಚ್ಚುತ್ತಿದೆ. ಆದರೆ ದೈಹಿಕ ಬೆಳವಣಿಗೆ ಕುಸಿಯುತ್ತಿದೆ. ಅನಾರೋಗ್ಯ ಮಕ್ಕಳನ್ನು ಕಾಡುತ್ತಿದೆ. ಇವುಗಳಿಂದ ಹೊರಬರಬೇಕಾದರೇ ವಿದ್ಯಾಭ್ಯಾಸದ ಜತೆಗೆ ಸಮಯ ಸಿಕ್ಕಾಗಲೆಲ್ಲ ಮಕ್ಕಳು ಆಟವಾಡುವುದನ್ನು ಪರಿಪಾಠ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ಮಟ್ಟದಲ್ಲಿ ನಡೆಯುವ ಎಲ್ಲ ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಗವಹಿಸಬೇಕು. ಆಟಗಳಲ್ಲಿ ಸೋಲು ಗೆಲುವಿನ ಬಗ್ಗೆ ಚಿಂತೆ ಮಾಡಬಾರದು. ಭಾಗವಹಿಸುವುದು ಮುಖ್ಯವಾಗುತ್ತದೆ ಎನ್ನುವುದನ್ನು ಮರೆಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಕ್ರೀಡಾಕೂಟ ಉದ್ಘಾಟಿಸಿದ ಡಾ.ದಯಾನಂದ ಗೌಳಿ ಅವರು ಮಾತನಾಡಿದರು.
ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸಿದರು. ಆಣದೂರ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚೇತನ್ ಸೊರಳ್ಳಿ ಬಸವ ಗುರುವಿನ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಸತೀಶ್ ಜೀರಗೆ, ತಳವಾಡ್ (ಕೆ) ಅಭಿವೃದ್ಧಿ ಅಧಿಕಾರಿ ಪ್ರಭುಶೆಟ್ಟಿ ಕುರುಬಖೇಳಗಿ, ಯುವ ಮುಖಂಡ ವಿಶಾಲ್ ಅತಿವಾಳ್, ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯ ಮುಖ್ಯಗುರು ಮಹೇಶ್ ಮಹಾರಾಜ್, ದೈಹಿಕ ನಿರ್ದೇಶಕ ಅನಿಲ ಪಾಟೀಲ್ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶ್ರೀದೇವಿ ಕುಲಕರ್ಣಿ ಸೇರಿದಂತೆ ಹಲವರು ಇದ್ದರು. ಮಹೇಶ್ ಕುಲಕರ್ಣಿ ಸ್ವಾಗತಿಸಿದರು. ಲಕ್ಷ್ಮಣ್ ಮೇತ್ರೆ ನಿರೂಪಿಸಿದರು. ಮಲ್ಲಪ್ಪ ಮಾದರ್ ವಂದಿಸಿದರು.