ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇದೆ ಎಂಬುದು ಸುಳ್ಳು: ಸುನಿಲ್ ಸಂಗಮ್
ಬೀದರ್ : ಇತ್ತೀಚೆಗೆ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇದೆ ಎಂಬ ಸುಳ್ಳು ಸುದ್ದಿಗಳು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಹರಡುತ್ತಿರುವುದು ಬಡ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಗಾಗಿ ಮೊಟ್ಟೆಯ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ಸುನಿಲ್ ಸಂಗಮ್ ಹೇಳಿದ್ದಾರೆ.
ಮೊಟ್ಟೆಯಲ್ಲಿ 'ಸಿ' ವಿಟಮಿನ್ ಹೊರತುಪಡಿಸಿ ಬಹುತೇಕ ಎಲ್ಲಾ ಅಗತ್ಯ ಪೌಷ್ಟಿಕಾಂಶಗಳಿದ್ದು, ಬಡ ಮಕ್ಕಳಿಗೆ ಇದು ಅತ್ಯಂತ ಅವಶ್ಯಕ ಆಹಾರವಾಗಿದೆ. ತಮ್ಮ ಹೋರಾಟದಿಂದಲೇ ಸರಕಾರಿ ಶಾಲೆಗಳಲ್ಲಿ ಪ್ರತಿನಿತ್ಯ ಮೊಟ್ಟೆ ವಿತರಿಸುವ ವ್ಯವಸ್ಥೆ ಜಾರಿಯಾಗಿದ್ದು, ಈಗ ಈ ಸುಳ್ಳು ಸುದ್ದಿಗಳಿಂದ ಮಕ್ಕಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಜೀಂ ಪ್ರೇಮಜೀ ಫೌಂಡೇಶನ್ ಸಹ ಬಡ ಮಕ್ಕಳ ಪೌಷ್ಟಿಕತೆಗಾಗಿ ಸರ್ಕಾರಕ್ಕೆ ಸಹಕಾರ ನೀಡುತ್ತಿದೆ. ತಂಬಾಕು, ಸಿಗರೇಟು ಮುಂತಾದ ಹಾನಿಕಾರಕ ವಸ್ತುಗಳಿಗೆ ಅನುಮತಿ ನೀಡುವ ಸರ್ಕಾರ, ಪೌಷ್ಟಿಕ ಆಹಾರವಾದ ಮೊಟ್ಟೆಗೆ ಕೆಟ್ಟ ಹೆಸರು ತರುವುದು ಖಂಡನೀಯ ಎಂದು ಹೇಳಿದ್ದಾರೆ.