ಬೀದರ್| ಬಸವಕಲ್ಯಾಣದಲ್ಲಿ ಕುರ್‌ಆನ್ ಪ್ರವಚನ ಕಾರ್ಯಕ್ರಮ
ಬೀದರ್ : ತಂದೆ ತಾಯಿ, ಸಹೋದರ, ಸಹೋದರಿ, ನೆರೆಹೊರೆಯವರು, ಸಂಬಂಧಿಕರೂಂದಿಗೆ ನಮ್ಮ ಸಂಬಂಧ ಚೆನ್ನಾಗಿದ್ದರೆ ಮೆಡಿಷನ್ ಕಡಿಮೆ ಮಾಡಬಹುದು. ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ವಸ್ತು ಅಂದರೆ ಅದು ಪ್ರೀತಿ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದು ಪ್ರಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞ ಹೇಳಿದರು.
ಬಸವಕಲ್ಯಾಣದ ಅನುಭವ ಸಭಾ ಭವನದಲ್ಲಿ ನಡೆದ ಮೂರನೆ ದಿನದ ಕುರ್‌ಆನ್ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಮುಹಮ್ಮದ್ ಕುಂಞ, ಪರಸ್ಪರ ಅಪಹಾಸ್ಶ ಮಾಡಬೇಡಿ. ಪರಸ್ಪರ ನಿಂದಿಸಬೇಡಿ, ಅಡ್ಡ ಹೆಸರಿನಿಂದ ಕರೆಯಬೇಡಿ, ದ್ವೇಷಾನ್ವೇಷಣೆ ಮಾಡಬೇಡಿ ಎಂದು ಉಪದೇಶ ನೀಡಿದರು.
ಪವಿತ್ರ ಕುರ್‌ಆನ್ ಮಾನವನ ಏಳಿಗೆಗಾಗಿ ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮೂಲಕ ಬದುಕಿನ ವಾಸ್ತವ ಹಾಗೂ ಉದ್ದೇಶ ತಿಳಿಸುತ್ತದೆ. ಹಾಗೆಯೇ ವಾಯು, ಉಸಿರು, ನೀರು, ಭೂಮಿ ಜೀವನ ಎಲ್ಲವೂ ದೇವರದ್ದಾಗಿದೆ. ಜಾತಿ, ಧರ್ಮ, ಮತ, ಪಂಗಡ, ದೇಶ ನೋಡದೆ ಎಲ್ಲರನ್ನು ಪ್ರಿತಿಸಲು ಪವಿತ್ರ ಕುರ್ ಆನ್ ಹೇಳಿಕೊಡುತ್ತದೆ ಎಂದು ಹೇಳಿದರು.
ಯಾರಲ್ಲಿ ಧರ್ಮ ಇರುತ್ತದೆಯೋ ಅವರು ಎಲ್ಲರನ್ನೂ ಪ್ರೀತಿಸುತ್ತಾರೆ. ಯಾರಲ್ಲಿ ಧರ್ಮದ ಚಿನ್ನೆ, ಬಣ್ಣ, ಪಕ್ಷಪಾತ, ಶ್ರೇಷ್ಠ ಎನ್ನುವ ಭಾವನೆ ಇರುತ್ತದೆಯೋ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. ಎಲ್ಲರನ್ನೂ ಕಂಡು ಮುಗುಳ್ನಗಬೇಕು. ಜನರೊಂದಿಗೆ ಒಳ್ಳೆಯ ಭಾವನೆ ಇಟ್ಟುಕೊಳ್ಳುವುದು ಶ್ರೇಷ್ಠವಾದ ಕೆಲಸವಾಗಿದೆ. ಸಂಬಂಧ ಹಾಳಾಗುವ ಯಾವ ಕೆಲಸ ಮಾಡಬೇಡಿ. ಜನರನ್ನು ನಿಂದಿಸಬೇಡಿ. ಬೆರೆಯವರ ಬಗ್ಗೆ ಚರ್ಚೆ ಮಾಡಿದರೆ ತಮ್ಮ ಮೃತ ಸಹೋದರನ ಮಾಂಸ ತಿಂದಹಾಗೆ ಎಂದು ಕುರ್ ಆನ್ ಹೇಳುತ್ತದೆ. ಅನಗತ್ಯವಾಗಿ ಬೇರೆಯವರ ಬಗ್ಗೆ ಮಾತನಾಡಬೇಡಿ. ಕುಟುಂಬ ಸಂಬಂಧ ಹಾಳು ಮಾಡುವರನ್ನು ದೇವರು ಮೆಚ್ಚುವುದಿಲ್ಲ. ನೆರೆಹೊರೆಯರ ಜೊತೆಗೆ ಉತ್ತಮವಾಗಿ ವರ್ತಿಸಿ ಸಂಬಂಧವನ್ನು ಬಲಪಡಿಸಿ ಎಂದು ಉಪದೇಶ ನೀಡಿದರು.
ಈ ಸಂದರ್ಭದಲ್ಲಿ ನಿರ್ಗುಡಿಯ ಹವಾ ಮಲ್ಲಿನಾಥ್ ಮಹಾರಾಜ, ಬಸವಪ್ರಭು ಸ್ವಾಮೀಜಿ, ಮಾಜಿ ಸಚಿವ ರಾಜಶೇಖರ್ ಪಾಟೀಲ್, ದತ್ತಾತ್ರೇಯ ಗಾದಾ, ಮಲ್ಲಿಕಾರ್ಜುನ್ ಗುಂಗೆ, ಇಸ್ಥೇಖಾರ್ ಅಹ್ಮದ್ ಖಾದ್ರಿ, ಬಸವೇಶ್ವರ ಪಂಚ ಕಮಿಟಿ ಸದಸ್ಯರು, ಜಮಾತೆ ಇಸ್ಲಾಂಎ ಹಿಂದ್ ನ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.