ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳು ಭಾರತಕ್ಕೆ ಮಾತ್ರ ಸೀಮಿತಗೊಂಡಿವೆ : ಡಾ. ಚನ್ನಬಸವಾನಂದ್ ಸ್ವಾಮೀಜಿ
ಬೀದರ್ : ಬುದ್ಧ, ಮಹಾವೀರ, ಏಸುಕ್ರಿಸ್ತ ಮತ್ತು ಗುರುನಾನಕರ ಸಮಾನತೆಯ ಸಂದೇಶಗಳು ವಿಶ್ವಮಟ್ಟದಲ್ಲಿ ಬೆಳೆದಿವೆ. ಆದರೆ ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳು ಭಾರತಕ್ಕೆ ಮಾತ್ರ ಸೀಮಿತಗೊಂಡಿವೆ. ಶಾಲಾ ಕಾಲೇಜು ಸ್ಥಾಪಿಸಿ, ಹಣ ಸಂಪಾದನೆ ಮಾಡುವುದು ಸುಲಭ. ಆದರೆ ವಿಶ್ವಮಟ್ಟದಲ್ಲಿ ಬಸವ ತತ್ವದ ಪ್ರಚಾರ, ಪ್ರಸಾರ ಮಾಡುವುದು ಕಠಿಣವಾದ ಕೆಲಸವಾಗಿದೆ. ಈ ಕಾರಣಕ್ಕಾಗಿ ಬಸವ ಸಂದೇಶಗಳನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಘನ ಉದ್ದೇಶ ನಮ್ಮದಾಗಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ್ ಜ್ಞಾನಪೀಠದ ಪೀಠಾಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ್ ಮಹಾಸ್ವಾಮೀಜಿ ಹೇಳಿದ್ದಾರೆ.
ದುಬೈನ ಅಲ್ ರಿಂಗ್ ನಗರದ ರಸ್ವೆಲ್ಲಾ ಹೊಟೇಲ್ ಸಭಾಂಗಣದಲ್ಲಿ ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ, ಹೈದರಾಬಾದ್ ನ ಗುರುಬಸವ ಫೌಂಡೇಶನ್ ಹಾಗೂ ಚನ್ನಬಸವೇಶ್ವರ್ ಸಾಹಿತ್ಯಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ ಆರನೇ ಬಸವ ತತ್ವ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಡಾ. ಚನ್ನಬಸವಾನಂದ್ ಮಹಾಸ್ವಾಮೀಜಿ, ನೇಪಾಳ, ಭೂತಾನ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್ ನಲ್ಲಿ ಬಸವ ಸಮ್ಮೇಳನ ಮಾಡಲಾಗಿದೆ. ಏಳನೇ ಅಂತಾರಾಷ್ಟ್ರೀಯ ಬಸವ ತತ್ವ ಸಮ್ಮೇಳನ ಸಿಂಗಾಪುರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ದುಬೈ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ. ಇಲ್ಲಿರುವ ಕನ್ನಡಿಗರು ಕೂಡ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ದುಬೈ ಕನ್ನಡಿಗ ಹಾಗೂ ಬಸವಾಭಿಮಾನಿ ಪ್ರಭುರಾಜ್ ಹರಕಂಗಿ ಅವರು ಮಾತನಾಡಿ, ಪೂಜ್ಯ ಶ್ರೀ ಚನ್ನಬಸವಾನಂದ್ ಮಹಾಸ್ವಾಮಿಗಳು ವಿಶ್ವಮಟ್ಟದಲ್ಲಿ ಬಸವ ತತ್ವದ ಪ್ರಚಾರಗೈದು ಭಾರತದ ಕೀರ್ತಿ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಸಂತಸದ ವಿಚಾರವಾಗಿದೆ. ಚನ್ನಬಸವಾನಂದ್ ಸ್ವಾಮೀಜಿ ಬಹುಭಾಷಾ ಪ್ರಾವೀಣ್ಯತೆ ಹೊಂದಿರುವ ಪ್ರತಿಭಾವಂತರು. ಅವರ ಬಸವ ತತ್ವದ ಪ್ರಚಾರದ ಪಯಣ ವಿಶ್ವಮಟ್ಟದಲ್ಲಿ ಸಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಸಾರ ಕೃತಿ ಲೋಕಾರ್ಪಣೆ ಮಾಡಲಾಯಿತು. ಸಮ್ಮೇಳನದಲ್ಲಿ ಭಾಗವಹಿದ ಶರಣರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಮೂಲದ ದುಬೈ ಕನ್ನಡಿಗ ಹಾಗೂ ಇಂಜಿನಿಯರ್ ಅಭಿಷೇಕ್ ಹರಕಂಗಿ, ಹುಬ್ಬಳ್ಳಿಯ ಶಿವಾನಂದ್ ಹೆಗಡೆ, ಮಹಾಂತಯ್ಯಾ ಗಣಾಚಾರಿ, ಬಾಬುರಾವ ಸೊಂತ, ಡಾ.ವೈಜಿನಾಥ್ ಭುಟ್ಟೆ, ಶ್ರೀದೇವಿ ಪಾಟೀಲ್, ಗಿರಿಜಮ್ಮ ಧಾರವಾಡ್, ಮಹಾರುದ್ರ ಡಾಕುಳಗಿ, ನ್ಯಾಯವಾದಿ ಅಶೋಕ್ ಮಾನೂರೆ, ಸತ್ಯಾದೇವಿ ಮಾತಾಜಿ, ನಾಗನಾಥ್ ಪಾಟೀಲ್ ಹೈದರಾಬಾದ್, ಶ್ರೀನಾಥ್ ಕೋರೆ, ಸಂಗಮೇಶ್ ಕೆ.ಬಿ, ವಿದ್ಯಾ ಧಾರವಾಡ್, ಜಗನ್ನಾಥ್ ಹೈದರಾಬಾದ್, ಮಂಜುನಾಥ್ ಹೈದರಾಬಾದ್, ಪ್ರಕಾಶ್ ಜಿ.ಕೆ ಹಾಗೂ ಗಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.