×
Ad

ಭಾಲ್ಕಿ | ಅಂಗನವಾಡಿಗಳಿಗೆ ಮೊಟ್ಟೆ, ಹಾಲಿನ ಪುಡಿ ಸರಬರಾಜು ಸ್ಥಗಿತ: ಅಧಿಕಾರಿಗಳನ್ನು ಅಮಾನತುಗೊಳಿಸಲು ಆಗ್ರಹಿಸಿ ಧರಣಿ

Update: 2025-12-30 20:36 IST

ಭಾಲ್ಕಿ : ಕಳೆದ ಮೂರು–ನಾಲ್ಕು ತಿಂಗಳುಗಳಿಂದ ಭಾಲ್ಕಿ ತಾಲೂಕಿನ ಎಲ್ಲಾ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಹಾಗೂ ಹಾಲಿನ ಪುಡಿ ಸರಬರಾಜು ನಿಲ್ಲಿಸಿರುವುದನ್ನು ಖಂಡಿಸಿ, ಯುವ ಕ್ರಾಂತಿ ಸಂಘಟನೆಯ ವತಿಯಿಂದ ಭಾಲ್ಕಿಯ ಶಿಶು ಅಭಿವೃದ್ಧಿ ಇಲಾಖೆಯ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಿಂದಲೇ ಅಂಗನವಾಡಿ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವಾಗಿರುವ ಮೊಟ್ಟೆ ಹಾಗೂ ಹಾಲಿನ ಪುಡಿ ನೀಡುವುದನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಿಲ್ಲಿಸಲಾಗಿದೆ. ಇದರಿಂದ ಅಧಿಕಾರಿಗಳು ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ಅಂಗನವಾಡಿ ಮಕ್ಕಳ ಪೌಷ್ಠಿಕತೆ ಕಾಪಾಡುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದ್ದರೂ, ಸರಬರಾಜು ಸ್ಥಗಿತದಿಂದ ಮಕ್ಕಳು ಪೋಷಕಾಂಶದ ಕೊರತೆ ಎದುರಿಸುತ್ತಿದ್ದು, ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಒಂದು ತಿಂಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಅಧಿಕಾರಿಗಳೂ ಈ ನಿರ್ಲಕ್ಷ್ಯದಲ್ಲಿ ಭಾಗಿಯಾಗಿರುವ ಶಂಕೆ ಮೂಡಿದೆ ಎಂದು ದೂರಲಾಗಿದೆ.

ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಹಾಗೂ ಹಾಲಿನ ಪುಡಿ ಸರಬರಾಜು ಆರಂಭಿಸಬೇಕು. ಜೊತೆಗೆ ಹಲವು ತಿಂಗಳಿನಿಂದ ಪೌಷ್ಠಿಕ ಆಹಾರ ಸರಬರಾಜು ಮಾಡದಿರುವ ಹಿನ್ನಲೆಯಲ್ಲಿ ಸಂಭವಿಸಿರಬಹುದಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ವಿಳಂಬದ ಬಗ್ಗೆ ಸಮಗ್ರ ತನಿಖೆ ನಡೆಸಿ ಒಂದು ವಾರದೊಳಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಯುವ ಕ್ರಾಂತಿ ಸಂಘಟನೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ, ತಾಲ್ಲೂಕು ಅಧ್ಯಕ್ಷ ಬಲವಂತ್, ಕೆ.ಡಿ. ಗಣೇಶ್, ವಿನೋದ್ ಕಾರಮುಂಗೆ, ಕೈಲಾಸ್ ಪಾಟೀಲ್, ಪಪ್ಪುರಾಜ್ ಚತುರೆ, ಮಹೇಶ್ ಕಟ್ಟಿಮನಿ, ಸುಂದರ್ ಮೇತ್ರೆ, ಬಿಬಿಸೆನ ಬಿರಾದರ್, ಸಚಿನ್ ಶಿಂಧೆ, ಆನಂದ್ ತಳವಾಡೆ, ಸಿದ್ರಾಮ್ ಮೇತ್ರೆ ಹಾಗೂ ನರೇಂದ್ರ ಸೊಮಶೆಟ್ಟೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News