ಹುಮನಾಬಾದ್ | ಪ್ರೊಟೋಕಾಲ್ ಉಲ್ಲಂಘಿಸಿ ಭೂಮಿ ಪೂಜೆ ಆರೋಪ : ಬಿಜೆಪಿ ಶಾಸಕ ಸಿದ್ದು ಪಾಟೀಲ್ ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ
ಹುಮನಾಬಾದ್ : ಕ್ಷೇತ್ರದ ಚಿಟಗುಪ್ಪಾ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ವೀಕ್ಷಣೆಗೆ ತೆರಳಿದ ಶಾಸಕ ಸಿದ್ದು ಪಾಟೀಲ್ ಅವರಿಗೆ ಪ್ರೊಟೋಕಾಲ್ ಉಲ್ಲಂಘಿಸಿ ಭೂಮಿ ಪೂಜೆ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಘೋಷಣೆ ಕೂಗಿದ ಘಟನೆ ಸೋಮವಾರ ನಡೆದಿದೆ.
ನಡೆದಿದ್ದೇನು? :
ಚಿಟಗುಪ್ಪಾ ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು 30 ಹಾಸಿಗೆಯಿಂದ 50 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದು, ಪುರಸಭೆ ವಾಣಿಜ್ಯ ಸಂಕಿರ್ಣ ಹಾಗೂ ಬಿಸಿಎಂ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಯಲಿದೆ ಎಂದು ಬಿಜೆಪಿ ಕಾರ್ಯಕರ್ತರು ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಹರಿಬಿಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪುರಸಭೆ ಸದಸ್ಯರು, ಪ್ರೊಟೋಕಾಲ್ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿ ಸೋಮವಾರ ಪಟ್ಟಣಕ್ಕೆ ಆಗಮಿಸಿದ ಶಾಸಕರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ಘೋಷಣೆ ಕೂಗಾಟ ನಡೆಯಿತು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಶಾಸಕ ಸಿದ್ದು ಪಾಟೀಲ್, ನಾನು ಭೂಮಿ ಪೂಜೆಗೆ ಬಂದಿಲ್ಲ. ಎಲ್ಲ ಕೆಲಸಗಳು ಮೊದಲೇ ಪ್ರಾರಂಭವಾಗಿವೆ. ನಾನು ಈ ದಿನ ವೀಕ್ಷಣೆಗೆ ಬಂದಿದ್ದೇನೆ. ಆಸ್ಪತ್ರೆಯ ಕೆಲಸವೂ ಸಹ 20 ದಿನಗಳ ಹಿಂದೆಯೇ ಪ್ರಾರಂಭವಾಗಿದೆ. ನಾನು ಕೆಲಸ ಯಾವ ಹಂತದಲ್ಲಿದೆ ಎಂದು ವೀಕ್ಷಣೆ ಮಾಡಲು ಬಂದಿರುವೆ. ಅಭಿವೃದ್ಧಿ ಕೆಲಸ ಬೇಕೆನ್ನುವವರು ಕೈಜೋಡಿಸಬೇಕೆ ಹೊರತು ಈ ರೀತಿ ವಿರೋಧ ಮಾಡುವುದು ಸರಿಯಲ್ಲ. ಇದು ಅಭಿವೃದ್ಧಿಗೆ ಅಡ್ಡಿ ಮಾಡಿದಂತಾಗುತ್ತದೆ. ಬ್ಯಾನರ್ ಹಾಕಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಪಕ್ಷದ ಕಾರ್ಯಕರ್ತರು ಮಾಡಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದರು.
ಆದರೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯ ರಾಜದೀಪ್ ಜಾಬಾ ಅವರು ಮಾತನಾಡಿ, ವೀಕ್ಷಣೆಗೆ ಬರುವುದಾದರೆ ಕಾಮಗಾರಿ ಪ್ರಾರಂಭವಾಗಿರಬೇಕು. ಕೆಲಸ ಪ್ರಾರಂಭವಾಗದೆ ಶಾಸಕರು ಭೂಮಿ ವೀಕ್ಷಣೆ ಮಾಡುವುದಕ್ಕೆ ಬಂದಿದ್ದಾರಾ ಎಂದು ಶಾಸಕ ಸಿದ್ದು ಪಾಟೀಲ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.