ಬೀದರ್ ಜಿಲ್ಲಾ ಪೊಲೀಸ್ ಅಕ್ಕ ಪಡೆ ರಾಜ್ಯಕ್ಕೆ ಮಾದರಿ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಬೀದರ್ ಜಿಲ್ಲಾ ಪೊಲೀಸ್ ಅಕ್ಕ ಪಡೆ ಈಗಾಗಲೇ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಮಂಗಳವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಅಕ್ಕ ಪಡೆಗೆ ನಿಯೋಜಿಸಲಾದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ತರಬೇತಿ ಪಡೆದ ಎನ್‌ಎಸ್ಪಿ ಕೆಡೆಟ್ ಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಕ್ಕ ಪಡೆ, ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುತ್ತಿದೆ ಎಂದರು.
ಸಮಾಜದಲ್ಲಿ ಸುರಕ್ಷತೆ ಮತ್ತು ಜಾಗೃತಿಯ ಕಿರು ಸೇತುವೆಯಾಗಿ ಅಕ್ಕ ಪಡೆ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಅಕ್ಕ ಪಡೆಯ ರಾಜ್ಯ ಸಲಹೆಗಾರ್ತಿ ಶೈನಿ ಪ್ರದೀಪ್ ಗುಂಟಿ ಅವರು ಮಾತನಾಡಿ, ಮಹಿಳೆಯರು ಸುರಕ್ಷತೆಯಾಗಿದ್ದರೆ ಜಿಲ್ಲೆ ಸುರಕ್ಷಿತವಾಗಿರುತ್ತದೆ ಎಂಬ ಆಲೋಚನೆಯಿಂದ ಅಕ್ಕ ಪಡೆ ರಚಿಸಿ, ಅದಕ್ಕೆ ವ್ಯವಸ್ಥಿತವಾಗಿ ಜಾರಿಯನ್ನು ಎಸ್ಪಿ ಅವರು ಮಾಡಿದ್ದಾರೆ. ಅಕ್ಕ ಪಡೆಯಿಂದ ಇಲ್ಲಿಯವರೆಗೆ ಎರಡು ಬಾಲ್ಯವಿವಾಹ ತಡೆಗಟ್ಟಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಚಂದ್ರಕಾಂತ್ ಪೂಜಾರಿ, ಡಿವೈಎಸ್ಪಿ ಎನ್.ಡಿ ಸನ್ನಿದಿ, ಸಿಪಿಐಗಳಾದ ವಿಜಯಕುಮಾರ್ ಬಾವಗೆ, ಪಾಲಾಕ್ಷಯ್ಯ ಹಿರೇಮಠ್, ಕೆ.ಎಂ.ಬಿರಾದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ, ಮಕ್ಕಳ ಅಭಿವೃದ್ಧಿ ಅಧಿಕಾರಿ ಶಾರದಾ, ಕರ್ನಾಟಕ ಅಲ್ಪಸಂಖ್ಯಾತರ ಕಮಿಟಿಯ ಸದಸ್ಯ ಮಂದೀಪ್ ಕೌರ್, ಗುರುನಾನಕ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ರೇಷ್ಮಾ ಕೌರ್, ವೇಟರ್ನರಿ ಕಾಲೇಜಿನ ಡಿನ್ ಡಾ.ತಾಂದಳೆ, ಶಾಹಿನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಖದಿರ್, ವಿಸ್ಡಮ್ ಕಾಲೇಜಿನ ಮುಖ್ಯಸ್ಥ ಸಲಾಹುದ್ದಿನ್, ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಧನಲಕ್ಷ್ಮೀ ಪಾಟೀಲ್, ಶಾಹಿನ್ ಪದವಿ ಕಾಲೇಜಿನ ಪ್ರಾಂಶುಪಾಲೆ ಅಫ್ರಾ ಬೇಗಮ್ ಹಾಗೂ ಪಿಎಸ್‌ಐ ನಂದಿನಿ ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.