ನನ್ನ ಮಾನಹಾನಿಗೆ ಹೆಂಡತಿ–ಮಕ್ಕಳನ್ನೇ ಬಳಸುತ್ತಿದ್ದಾರೆ : ಸಂಜುಕುಮಾರ್ ವಿರುದ್ಧ ಶಾಸಕ ಶರಣು ಸಲಗರ್ ಆರೋಪ
ಶಾಸಕ ಶರಣು ಸಲಗರ್, ಸಂಜುಕುಮಾರ್ ಸುಗುರೆ
ಬೀದರ್ : ತನ್ನ ಮಾನಹಾನಿ ಮಾಡುವ ಉದ್ದೇಶದಿಂದ ನೇರವಾಗಿ ಎದುರು ಬರದೆ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಬಳಸಿ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಶಾಸಕ ಶರಣು ಸಲಗರ್ ಅವರು ಬಸವಕಲ್ಯಾಣದ ನಿವಾಸಿ ಸಂಜುಕುಮಾರ್ ಸುಗುರೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಜುಕುಮಾರ್‌ರನ್ನು ಮಾಧ್ಯಮಗಳಲ್ಲಿ ಉದ್ಯಮಿ ಎಂದು ಬಿಂಬಿಸಲಾಗುತ್ತಿದೆ. ಆದರೆ ನನ್ನ ದೃಷ್ಟಿಯಲ್ಲಿ ಅವನು ಮೀಟರ್ ಬಡ್ಡಿ ದಂಧೆಕೋರನಾಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಬಸವಕಲ್ಯಾಣಕ್ಕೆ ಬಂದು ಐದು ವರ್ಷಗಳಾಗಿದೆ. ನನ್ನ ಹೆಸರು ಬಳಸಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ, ಹುಲಸೂರಿನಲ್ಲಿ ಪೆಟ್ರೋಲ್ ಬಂಕ್ ಖರೀದಿಸಿದ್ದಾನೆ. ಅವನು ಹೊಂದಿರುವ ಆಸ್ತಿಗಳಲ್ಲಿ ಶೇ.90 ರಷ್ಟು ನನ್ನ ಹೆಸರನ್ನೇ ಬಳಸಿಕೊಂಡು ಸಂಪಾದಿಸಿದ್ದಾನೆ ಎಂದು ದೂರಿದರು.
ನಾನು 99 ಲಕ್ಷ ರೂ. ನೀಡಬೇಕೆಂದು ಹೇಳಿ ನನ್ನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾನೆ. ಆದರೆ ಅಕ್ಟೋಬರ್ 16ರ, 2024ರ ನಂತರ ನನ್ನ ಮತ್ತು ಆತನ ನಡುವೆ ಯಾವುದೇ ಹಣಕಾಸು ವ್ಯವಹಾರವೇ ಇಲ್ಲ. ನಾನು ಅವನಿಗೆ ಒಂದು ರೂಪಾಯಿ ಕೂಡ ಕೊಡಬೇಕಾಗಿಲ್ಲ ಎಂಬುದನ್ನು ದಾಖಲೆಗಳ ಸಮೇತ ಕೋರ್ಟ್‌ಗೂ ಹಾಗೂ ಮಾಧ್ಯಮಗಳ ಮುಂದೆಯೂ ಸಲ್ಲಿಸುತ್ತೇನೆ ಎಂದು ಹೇಳಿದರು.
ನನ್ನ ಸಮೀಪದಲ್ಲಿದ್ದ ಕಾರಣ ನಾನು ಬ್ಯಾಂಕ್‌ನ ಬ್ಲ್ಯಾಂಕ್ ಚೆಕ್‌ಗಳಿಗೆ ಸಹಿ ಮಾಡಿ ಅವನ ಬಳಿ ಇಡುತ್ತಿದ್ದೆ. ಆ ಸಮಯದಲ್ಲೇ ಅವನು ದುರುಪಯೋಗ ಮಾಡಿಕೊಳ್ಳಬಹುದು ಎಂಬ ಶಂಕೆಯಿಂದ ಆಗಿನ ಎಸ್ಪಿ ಅವರಿಗೆ ದೂರು ಕೂಡ ನೀಡಿದ್ದೇನೆ. ಒಂದು ವೇಳೆ ಹಣದ ವ್ಯವಹಾರವೇ ಇದ್ದಿದ್ದರೆ ಚುನಾವಣೆಯ ಅಕೌಂಟ್ ಬಳಸುತ್ತಿದ್ದೇನಾ? ಎಂದು ಪ್ರಶ್ನಿಸಿದರು.
ಚುನಾವಣೆಗೆ ಸಂಬಂಧಿಸಿದ ಆ ಅಕೌಂಟ್‌ನ್ನು ಓಪನ್ ಮಾಡಿಸಿದ್ದು ಕೂಡ ಅವನೇ, ಚುನಾವಣೆಯ ನಂತರ ಮುಚ್ಚಿದ್ದು ಕೂಡ ಅವನೇ. ಈಗ ಅದೇ ಅಕೌಂಟ್‌ನ ಚೆಕ್ ಬಳಸಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ ಎಂದು ಆರೋಪಿಸಿದರು.
ಆತನು ನನ್ನನ್ನು ಬ್ಲಾಕ್‌ಮೇಲ್ ಮಾಡುವ ಕೆಲಸ ಮಾಡಿದ್ದಾನೆ. ಈ ಪ್ರಕರಣದಲ್ಲಿ ನಾನು ನೂರಕ್ಕೆ ನೂರು ಪರಿಶುದ್ಧನಿದ್ದೇನೆ. ನಾನು ಯಾವುದೇ ರೀತಿಯ ಜೀವ ಬೆದರಿಕೆ ಹಾಕಿಲ್ಲ. ಕಾನೂನು ಪ್ರಕಾರ ಅವನಿಗೆ ಶೇಕಡಾ ನೂರು ಶಿಕ್ಷೆಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಶರಣು ಸಲಗರ್ ಹೇಳಿದರು.
ಅತ್ಯಂತ ನೋವಿನ ಸಂಗತಿಯೆಂದರೆ, ಆತ ತನ್ನ ಹೆಂಡತಿ ಹಾಗೂ ಮಕ್ಕಳನ್ನೂ ಸಹ ಬಳಸಿಕೊಂಡು ನನ್ನ ಮಾನಹಾನಿ ಮಾಡಲು ಯತ್ನಿಸುತ್ತಿದ್ದಾನೆ. ಇದು ಅತ್ಯಂತ ನೀಚ ಕೃತ್ಯ ಎಂದು ಅವರು ಆರೋಪಿಸಿದರು.