ಬೀದರ್ | ಜ.30 ರಿಂದ 24ನೇ ವಚನ ವಿಜಯೋತ್ಸವ : ಡಾ.ಗಂಗಾಂಬಿಕೆ ಅಕ್ಕ
ಬೀದರ್ : ಜ.30 ರಿಂದ ಫೆ.1ರ ವರೆಗೆ ನಗರದ ಬಸವಗಿರಿಯಲ್ಲಿ 24ನೇ ವಚನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕೆ ಅಕ್ಕ ಅವರು ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 24ನೇ ವಚನ ವಿಜಯೋತ್ಸವವನ್ನು ಜ.30, 31 ಮತ್ತು ಫೆ.1 ರಂದು ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದರು.
ಬಸವಾದಿ ಶರಣ ವಚನಗಳು, ಮಾನವ ಬದುಕಿನ ದಾರಿಯಲ್ಲಿ ಹಚ್ಚಿಟ್ಟ ದೀಪಗಳು. ಸಮಾನತೆ, ಸಹಕಾರ, ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಧರ್ಮದ ನುಡಿ ರಚನೆಗಳು. 12ನೇ ಶತಮಾನದ ಶರಣರ ಸ್ವಾನುಭಾವದಿಂದ ಮೂಡಿ ಬಂದಿರುವ ಈ ಶ್ರೇಷ್ಠ ನುಡಿಗಳು ಇಂದು ನಮಗೆ ಉಳಿದು ಬಂದಿದ್ದೇ ರೋಚಕ ಸಂಗತಿ. ಶರಣರ ಬಲಿದಾನ ಹಾಗೂ ವೀರಗಾಥೆಯ ಕಾರ್ಯಗಳಿಂದ ಉಳಿದು ಬಂದಿರುವ 'ವಚನ ಸಾಹಿತ್ಯ ಸಂರಕ್ಷಣೆ' ಸ್ಮರಣೆಗಾಗಿ ಪ್ರತಿ ವರ್ಷ ವಚನ ವಿಜಯೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ನುಡಿದರು.
ಜ.30 ರಂದು ಮುಂಜಾನೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜಾಯೋಗ, ಮುಂಜಾನೆ 11.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ, ಮಧ್ಯಾಹ್ನ 3 ಗಂಟೆಗೆ ಸ್ತ್ರೀ ಶಕ್ತಿ ಸಮಾವೇಶ, ಸಾಯಂಕಾಲ 6 ಗಂಟೆಗೆ ಶರಣ ಕಲಾವೈಭ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಜ.31 ರಂದು ಬೆಳಗ್ಗೆ 8 ಗಂಟೆಗೆ ಸಾಮೂಹಿಕ ವಚನ ಪಾರಾಯಣ, ಬೆಳಿಗ್ಗೆ 11 ಗಂಟೆಗೆ ಯುವ ಶಕ್ತಿ ಸಮಾವೇಶ- ವಿಶ್ವಕಲ್ಯಾಣ ಯುವ ಪರಿಷತ್ ನವ ಸಮಾರಂಭ, ಮಧ್ಯಾಹ್ನ 3 ಗಂಟೆಗೆ ಧರ್ಮ ಚಿಂತನಗೋಷ್ಠಿ, ಸಾಯಂಕಾಲ 6 ಗಂಟೆಗೆ ಶರಣ ಕಲಾ ವೈಭವ-ವಚನ ನೃತ್ಯೋತ್ಸವ ಕಾರ್ಯಕ್ರಮ ಜರುಗಲಿವೆ. ಫೆ.1 ರಂದು ಬೆಳಗ್ಗೆ 9 ಗಂಟೆಗೆ ಮೆರವಣಿಗೆ, ಮಧ್ಯಾಹ್ನ 2:30 ಗಂಟೆಗೆ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಚಿಂತನಕಾರ ಸಿದ್ದಣ್ಣ ಲಂಗೋಟಿ, ಹಿರಿಯರಾದ ಬಸವರಾಜ್ ಬುಳ್ಳಾ, ಸೋಮಶೇಖರ್ ಪಾಟೀಲ್ ಗಾದಗಿ, ರಾಜೇಂದ್ರಕುಮಾರ್ ಗಂದಗೆ, ಶರಣಪ್ಪ ಮಿಠಾರೆ, ಚಂದ್ರಕಾಂತ್ ಮಿರ್ಚೆ, ಸುರೇಶ್ ಚನಶೆಟ್ಟಿ, ಬಾಬು ವಾಲಿ, ರಾಜಕುಮಾರ್ ಟಿಳ್ಳೆಕರ್, ಆದಿಶ್ ವಾಲಿ, ವಿಶ್ವನಾಥ್ ಕಾಜಿ, ಜಯರಾಜ್ ಖಂಡ್ರೆ, ವಿಜಯಲಕ್ಷ್ಮೀ ಸುಲೇಪೇಟ್ ಹಾಗೂ ಶಿವಶಂಕರ್ ಟೋಕರೆ ಸೇರಿದಂತೆ ಇತರರಿದ್ದರು.