×
Ad

Bidar | ಭಾಲ್ಕಿ ಆಹಾರ ಶಾಖೆಯ ಹೊರಸಂಪನ್ಮೂಲ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ

ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

Update: 2026-01-27 19:01 IST

ಬೀದರ್ : ಭಾಲ್ಕಿ ತಾಲ್ಲೂಕಿನ ಆಹಾರ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಸಂಪನ್ಮೂಲ ಕಂಪ್ಯೂಟರ್ ಆಪರೇಟರ್‌ಗಳಾದ ಯವ್ವನ್ (ಚನ್ನು) ಮತ್ತು ಶಿವಕುಮಾರ್ ಅವರನ್ನು ತಕ್ಷಣವೇ ಕರ್ತವ್ಯದಿಂದ ಬಿಡುಗಡೆ ಮಾಡಿ ಅಮಾನತು ಮಾಡಬೇಕು ಎಂದು ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯು ಒತ್ತಾಯಿಸಿದೆ.

ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಈ ಇಬ್ಬರು ಸಿಬ್ಬಂದಿಗಳು ದಿನನಿತ್ಯವೂ ಸಮಯಕ್ಕೆ ಕಚೇರಿಗೆ ಹಾಜರಾಗದೇ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಚೇರಿಗೆ ಆಗಮಿಸುವ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರೊಂದಿಗೆ ಅಸಭ್ಯವಾಗಿ ಹಾಗೂ ಅವಾಚ್ಯ ಭಾಷೆಯಲ್ಲಿ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಭಾಲ್ಕಿ ತಾಲ್ಲೂಕಿನಲ್ಲಿ ಪಡಿತರ ವಿತರಣೆಯು ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ. ಇದಕ್ಕೆ ಆಹಾರ ಶಾಖೆಯಲ್ಲಿನ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರವೇ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಹೊಸ ಪಡಿತರ ಚೀಟಿಗೆ ಅನುಮೋದನೆ ನೀಡಲು 4 ರಿಂದ 5 ಸಾವಿರ ರೂ. ಲಂಚ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪವೂ ಮನವಿಯಲ್ಲಿ ಉಲ್ಲೇಖವಾಗಿದೆ.

ಭ್ರಷ್ಟಾಚಾರದಲ್ಲಿ ತೊಡಗಿರುವ ಹೊರಸಂಪನ್ಮೂಲ ಸಿಬ್ಬಂದಿಗಳಾದ ಯವ್ವನ್ (ಚನ್ನು) ಮತ್ತು ಶಿವಕುಮಾರ್ ಅವರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆ ಮಾಡಬೇಕು. ಜೊತೆಗೆ ಇವರಿಗೆ ಬೆಂಬಲ ನೀಡಿರುವ ಆಹಾರ ಶಾಖೆಯ ಅಧಿಕಾರಿ ಅಮರ್ ಪಾಟೀಲ್ ಅವರನ್ನು ಕೂಡಲೇ ಅಮಾನತು ಮಾಡಿ, ಇಲಾಖಾ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ಸಮಿತಿಯು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗಗನ್ ಫುಲೆ, ಕಲ್ಲಪ್ಪ, ಜೈವರ್ಧನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News