ಬೀದರ್ | ಬ್ರಿಮ್ಸ್‌ನಲ್ಲಿ ಭ್ರಷ್ಟಾಚಾರ, ಅವ್ಯವಸ್ಥೆ ಖಂಡಿಸಿ ಮುತ್ತಿಗೆ : ಬಾಕಿ ವೇತನ ತಕ್ಷಣ ಬಿಡುಗಡೆಗೆ ಒತ್ತಾಯ
ಬೀದರ್ : ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಆಡಳಿತಾತ್ಮಕ ಅವ್ಯವಸ್ಥೆ ಹಾಗೂ ನೌಕರರ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಮಂಗಳವಾರ ಬ್ರಿಮ್ಸ್ ಆಸ್ಪತ್ರೆಗೆ ಮುತ್ತಿಗೆ ಹಾಕಲಾಯಿತು.
ಜಿಲ್ಲಾಧಿಕಾರಿಗಳ ಮುಖಾಂತರ ವೈದ್ಯಕೀಯ ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬ್ರಿಮ್ಸ್ ಆಸ್ಪತ್ರೆಯಲ್ಲಿ ಅಕ್ರಮವಾಗಿ ಹುದ್ದೆ ವಹಿಸಿಕೊಂಡಿರುವ ಅಧಿಕಾರಿಗಳಿಂದ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದ್ದು, ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು 300ಡಿ ಮತ್ತು ಸಿ ಗ್ರೂಪ್ ನೌಕರರ ಆರು ತಿಂಗಳ ವೇತನ ಬಾಕಿಯಾಗಿದೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಯಾವುದೇ ನೋಟಿಸ್ ನೀಡದೆ 40 ಗುತ್ತಿಗೆ ವೈದ್ಯರನ್ನು ವಜಾಗೊಳಿಸಿರುವುದು ಖಂಡನೀಯವಾಗಿದೆ. ಅಕ್ರಮವಾಗಿ ಹುದ್ದೆ ಪಡೆದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೇವೆಯಿಂದ ವಜಾಗೊಳಿಸಬೇಕು. ತಪ್ಪಿತಸ್ಥರಿಂದ ನಷ್ಟ ವಸೂಲಿ ಮಾಡಬೇಕು. ಎಲ್ಲಾ ನೌಕರರ ಬಾಕಿ ವೇತನ ತಕ್ಷಣವೇ ಬಿಡುಗಡೆಗೊಳಿಸಿ, ಸೇವೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕರ ಉಮೇಶಕುಮಾರ್ ಸೊರಳ್ಳಿಕರ್, ವೀರ ಕನ್ನಡಿಗರ ಸೇನೆಯ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ, ಅಶೋಕ್ ಸಂಗಮ್, ಗೌತಮ್ ಚೌಹ್ವಾಣ, ವಿಜಯಕುಮಾರ್ ಬಡಿಗೇರ್, ರುಕ್ಮೀಣಿ ಜೀರ್ಗೆ, ಜೈಭೀಮ್ ಶರ್ಮಾ, ವಿಜಯಕುಮಾರ್ ಸಾಮ್ರಾಟ್, ತುಕರಾಮ್ ಭೂರೆ, ಬಾಬುರಾವ್ ಕೌಠಾ(ಬಿ),ದೇವರಾಜ್ ಡಾಕುಳಗಿ, ಸಿದ್ದಾರ್ಥ ನಾಟೇಕರ್, ಪ್ರಕಾಶ್ ಬಂಗಾರೆ, ರಂಜೀತ್ ವರ್ಮಾ, ಪ್ರಕಾಶ್ ಚಿಕ್ಕಪೇಟ್ ಹಾಗೂ ಸಂದೀಪ್ ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.