Bidar | ಅ.24, 25ರಂದು 25ನೇ ಕಲ್ಯಾಣ ಪರ್ವ ರಜತ ಮಹೋತ್ಸವ : ಡಾ.ಚನ್ನಬಸವಾನಂದ ಸ್ವಾಮೀಜಿ
ಬೀದರ್: ಬಸವ ಧರ್ಮ ಪೀಠದ ಸ್ವಾಭಿಮಾನಿ ಹಾಗೂ ತತ್ವನಿಷ್ಠ ಶರಣರಿಂದ ಅ.24 ಮತ್ತು 25ರಂದು 25ನೇ ಕಲ್ಯಾಣ ಪರ್ವ ರಜತ ಮಹೋತ್ಸವ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀದರ್ ಜಿಲ್ಲಾ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಮಹಿಳಾ ಗಣದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
2002ರಲ್ಲಿ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಆರಂಭವಾದ ಕಲ್ಯಾಣ ಪರ್ವ ಇದೀಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಮಾತೆ ಮಹಾದೇವಿ ಅವರ ಆಶಯದಂತೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಬಸವದಳದ 25 ಶಾಖೆಗಳನ್ನು ಆಯ್ಕೆ ಮಾಡಿ ಅತ್ಯುತ್ತಮ ರಾಷ್ಟ್ರೀಯ ಬಸವದಳ ಪ್ರಶಸ್ತಿ ನೀಡಲಾಗುವುದು. ಲಿಂಗಾನಂದ ಅಪ್ಪಾಜಿ ಅವರ ಸ್ಮರಣಾರ್ಥ ಗೌರವ ಪುರಸ್ಕಾರವನ್ನೂ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಬಸವ ತತ್ವವನ್ನು ಅನುಸರಿಸುತ್ತಿರುವ 25 ಜೋಡಿ ದಂಪತಿಗಳಿಗೆ ‘ಆದರ್ಶ ಶರಣ ದಂಪತಿಗಳು’ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 25 ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕ್ರಾಂತಿ ಗಂಗೋತ್ರಿ ಮಹಿಳಾ ಗಣದ ರಾಷ್ಟ್ರೀಯ ಅಧ್ಯಕ್ಷೆ ಸತ್ಯಾದೇವಿ ಮಾತೆ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ 10 ಸಾವಿರಕ್ಕೂ ಅಧಿಕ ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಗಮಿಸುವ ಭಕ್ತರಿಗೆ ಪ್ರಸಾದ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಅ.24ರಂದು ಬೆಳಿಗ್ಗೆ 6 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ, 7 ಗಂಟೆಗೆ ವೇದಿಕೆ ದೈವೀಕರಣ ಹಾಗೂ ಬಸವೇಶ್ವರ ಪೂಜಾವೃತ್ತ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಕಲ್ಯಾಣ ಪರ್ವದ ರಜತ ಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ಲಿಂಗಾಯತ ಧರ್ಮದ ಮಾನ್ಯತೆ ಹೋರಾಟ ಕುರಿತು ಚಿಂತನಗೋಷ್ಠಿ ನಡೆಯಲಿದೆ.
ಅ.25ರಂದು ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ಪಥಸಂಚಲನ, ಭವ್ಯ ಮೆರವಣಿಗೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ಶಿವರಾಜ್ ಪಾಟೀಲ್ ಅತಿವಾಳ್, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಮಲ್ಲಿಕಾರ್ಜುನ ಶಾಪೂರ್, ಮಲ್ಲಿಕಾರ್ಜುನ ಬುಕ್ಕಾ, ಬಸವರಾಜ ಸಂಗಮದ, ವಿಶ್ವನಾಥ್ ಪಾಟೀಲ್ ಗೊಂದೆಗಾಂವ್, ರವಿಕಾಂತ್ ಬಿರಾದಾರ್, ಸರಸ್ವತಿ ಶಟಕಾರ್ ಹಾಗೂ ಮನ್ಮಥಯ್ಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.