ಬೀದರ್‌: ಔರಾದ್ ತಾಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯವೃತ್ತಿ ನಡೆಸುತ್ತಿದ್ದ ಆರೋಪದಡಿ ಪ್ರೇಮಕುಮಾರ್ ಎಂಬುವವರ ಕ್ಲಿನಿಕ್‌ನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಚಾಂದೋರಿ ಗ್ರಾಮದಲ್ಲಿ ಪ್ರೇಮಕುಮಾರ್ ಅವರು ಯಾವುದೇ ಅರ್ಹ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 7 ಗಂಟೆಗೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಕ್ಲಿನಿಕ್‌ನ್ನು ಸೀಜ್ ಮಾಡಿದ್ದಾರೆ.

ಬೀದರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ಈ ದಾಳಿ ನಡೆಸಲಾಗಿದೆ. ಈ ಹಿಂದೆ ಪ್ರೇಮಕುಮಾರ್ ಅವರು ಮುಧೋಳ್ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಶುಶ್ರೂಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರ ಕ್ಲಿನಿಕ್ ಮೇಲೆ ದಾಳಿ ನಡೆಸಿ ಸೀಜ್ ಮಾಡಲಾಗಿತ್ತು. ಬಳಿಕ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಜ. 31ರಂದು ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದರು ಎಂದು ತಿಳಿದುಬಂದಿದೆ.

ಅಮಾನತುಗೊಂಡಿದ್ದರೂ ಪ್ರೇಮಕುಮಾರ್ ಅವರು ಖಾಸಗಿಯಾಗಿ ವೈದ್ಯಕೀಯ ವೃತ್ತಿ ಮುಂದುವರಿಸಿದ್ದರು ಎನ್ನಲಾಗಿದ್ದು, ಈ ಕುರಿತು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಾಟ್ಸ್‌ಆ್ಯಪ್‌ಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕ್ಲಿನಿಕ್‌ನ್ನು ಸೀಜ್ ಮಾಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಔರಾದ್ ತಾಲೂಕು ಆರೋಗ್ಯಾಧಿಕಾರಿ ಡಾ. ಅನೀಲಕುಮಾರ್ ಎಕಲೂರೆ, ಕೆಪಿಎಂಇ ವಿಷಯ ನಿರ್ವಾಹಕ ಮಹೇಶ್ವರರೆಡ್ಡಿ, ಪೊಲೀಸ್ ಸಿಬ್ಬಂದಿ ಅಶೋಕ್ ಹಾಗೂ ಸಿಬ್ಬಂದಿ ಬಲಭೀಮ ಮತ್ತು ಸಿದ್ದು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor