ಬೀದರ್ ಜಿಲ್ಲೆಯಲ್ಲಿ 20 ಲಕ್ಷ ಮಾನವ ದಿನ ಸೃಜನೆ: ಸಚಿವ ಈಶ್ವರ್ ಖಂಡ್ರೆ
ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ 10 ಕೋಟಿ ರೂ. ಮಂಜೂರು
ಬೀದರ್ : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜು.1ರಿಂದ ಬೀದರ್ ಜಿಲ್ಲೆಯಲ್ಲಿ 20 ಲಕ್ಷ ಮಾನವ ದಿನ ಸೃಜಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.150ರಷ್ಟು ಹೆಚ್ಚಳವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಧಿಯಲ್ಲಿ ಮನರೇಗಾ ಅಡಿಯಲ್ಲಿ 7 ಲಕ್ಷ ಮಾನವ ದಿನ ಸೃಷ್ಟಿ ಮಾಡಲಾಗಿತ್ತು. ಆದರೆ, ಈ ವರ್ಷ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 13 ಲಕ್ಷ ಮಾನವ ದಿನ ಹೆಚ್ಚಳವಾಗಿದೆ ಎಂದರು.
ಮಳೆ ಕೊರತೆಯಿಂದ ಬರ ಪರಿಸ್ಥಿತಿ ತಲೆದೂರಿದ್ದು, ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ಹೋಗುತ್ತಿದ್ದ ಗ್ರಾಮೀಣ ಬಡಜನರು, ಮಹಿಳೆಯರು, ದುರ್ಬಲರು, ವಂಚಿತರು, ಭೂರಹಿತ ಕೂಲಿ ಕಾರ್ಮಿಕರಿಗೆ ಇರುವ ಸ್ಥಳದಲ್ಲಿಯೇ ಉದ್ಯೋಗ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 1.75 ಕೋಟಿ ಮಾನವ ದಿನ ಸೃಜನೆ ಮಾಡಲಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಗುಳೆ ಹೋಗದಂತೆ ತಡೆಯಲು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ನರೇಗಾದ 90:10 ಅನುಪಾತವನ್ನು ಬದಲಾಯಿಸಿ 60:40 ಅನುಪಾತ ಮಾಡಿದ್ದು, ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗುತ್ತಿದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.
ಅಂತರ್ಜಲ ಮಟ್ಟ ಹೆಚ್ಚಿಸಲು ಕೊಳವೆ ಬಾವಿ ಮರುಪೂರಣಕ್ಕೂ ಅವಕಾಶ : ಅಂತರ್ಜಲ ಮಟ್ಟ ದೇಶಾದ್ಯಂತ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿಸಲು ವೈಯಕ್ತಿಕ ಕೊಳವೆ ಬಾವಿಗಳಿಗೂ ಮರುಪೂರಣ (ರೀಚಾರ್ಜ್ ಪಿಟ್) ಮಾಡಿಸಲು ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ದನದ ಕೊಟ್ಟಿಗೆ, ಕುರಿ-ಮೇಕೆ ಕೊಟ್ಟಿಗೆ, ಚೆಕ್ ಡ್ಯಾಂ, ಶಾಲಾ ಕೊಠಡಿ, ಅಂಗನವಾಡಿ ನಿರ್ಮಾಣಕ್ಕೂ ಅವಕಾಶವಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆಸ್ತಿ ಸೃಜನೆ ಮಾಡಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ದಿನಾಲೂ 382 ರೂ. ಹಣ ಪಡೆದು, ಶ್ರಮದಾನ ಮಾಡಿದರೆ ಗ್ರಾಮೀಣ ವಿಕಾಸವಾಗುತ್ತದೆ ಎಂದರು.
ಹೊಸದಾಗಿ ಜಾಬ್ ಕಾರ್ಡ್ ವಿತರಣೆ: ಹಲವರ ಜಾಬ್ ಕಾರ್ಡ್ ನಿಷ್ಕ್ರಿಯವಾಗಿತ್ತು. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಬರ ಪರಿಸ್ಥಿತಿಯ ಕಾಲದಲ್ಲಿ ಉದ್ಯೋಗ ಒದಗಿಸಲು ಜಾಬ್ ಕಾರ್ಡ್ ಮೇಳ ನಡೆಸಲು ಸೂಚಿಸಿದ ಪರಿಣಾಮ ಬೀದರ್ ಜಿಲ್ಲೆಯೊಂದರಲ್ಲೇ 26 ಸಾವಿರ ಕುಟುಂಬಗಳು ಹೊಸದಾಗಿ ಜಾಬ್ ಕಾರ್ಡ್ ಮಾಡಿಸಿಕೊಂಡಿವೆ ಎಂದು ಅವರು ತಿಳಿಸಿದರು.
ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಬೀದರ್ ಜಿಲ್ಲೆಗೆ ಕುಡಿಯುವ ನೀರಿಗಾಗಿ 10 ಕೋಟಿ ರೂ. ಮಂಜೂರು ಮಾಡಲಾಗಿದೆ. ಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಈಗಿನಿಂದಲೇ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ : ಭಾಲ್ಕಿ ತಾಲೂಕಿನ ಏಣಕುರ್ ಗ್ರಾಮದ ಯುವಕನ ಜೊತೆಗೆ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟಿನ ಶಂಕೆಯ ಬಗ್ಗೆ ಪ್ರತಿಕ್ರಿಯೇ ನೀಡಿದ ಅವರು, ಯಾರೇ ದೇಶದ್ರೋಹದ ಕಾರ್ಯ ಮಾಡಿದ್ದರೆ, ನಿಷ್ಪಕ್ಷಪಾತ ತನಿಖೆಯಾಗುತ್ತದೆ. ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಅನಾದಿಕಾಲದಿಂದಲೂ ಸಮಾಜದಲ್ಲಿ ಸಮಾಜಘಾತುಕ ಶಕ್ತಿಗಳು ಇದ್ದೇ ಇವೆ. ಇಂತಹವರನ್ನು ನಿಗ್ರಹಿಸುವುದು ನಿರಂತರ ಪ್ರಕ್ರಿಯೆ, ಅದನ್ನು ಪೊಲೀಸ್ ಇಲಾಖೆ ಮಾಡುತ್ತದೆ ಎಂದು ತಿಳಿಸಿದರು.