ಹುಲಸೂರು | ಯುವಶಕ್ತಿಯಿಂದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳಲಿ: ತಹಶೀಲ್ದಾರ್ ಶಿವಾನಂದ ಮೇತ್ರೆ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ; ತಾಲೂಕು ಮಟ್ಟದ ಯುವ ಸಂಸತ್ ಅಣಕು ಪ್ರದರ್ಶನ
ಹುಲಸೂರು : ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ಹಾಗೂ ಮೌಲ್ಯವನ್ನು ಇಂದಿನ ಯುವಕ–ಯುವತಿಯರು ಅರಿತುಕೊಳ್ಳಬೇಕು. ಯುವಶಕ್ತಿಯಿಂದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳಬೇಕು ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಯುವ ಸಂಸತ್ ಅಣಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭೆ ಹಾಗೂ ವಿಧಾನಸಭೆಗಳ ಅಧಿವೇಶನಗಳು ಯಾವ ರೀತಿಯಲ್ಲಿ ನಡೆಯುತ್ತವೆ, ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವರು, ಶಾಸಕರು ಹಾಗೂ ಸಂಸದರು ಜನರ ಸಮಸ್ಯೆಗಳ ಕುರಿತು ಹೇಗೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದನ್ನು ಯುವಕರು ತಿಳಿದುಕೊಳ್ಳಬೇಕು. ಸರ್ಕಾರದ ವಿವಿಧ ಇಲಾಖೆಗಳ ಸವಾಲುಗಳಿಗೆ ಆಡಳಿತ ಪಕ್ಷದ ಸದಸ್ಯರು ಹೇಗೆ ಉತ್ತರಿಸುತ್ತಾರೆ ಹಾಗೂ ವಿರೋಧ ಪಕ್ಷದ ನಾಯಕರು ಯಾವ ರೀತಿಯ ಜವಾಬ್ದಾರಿ ನಿರ್ವಹಿಸುತ್ತಾರೆ ಎಂಬುದನ್ನು ಯುವ ಸಂಸತ್ ಅಣಕು ಪ್ರದರ್ಶನದ ಮೂಲಕ ಅರಿತುಕೊಳ್ಳಬಹುದು ಎಂದರು.
ಯುವ ಪದವೀಧರರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು, ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ್ ಕಾಂಬಳೆ ಮಾತನಾಡಿ, ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜ್ಞಾವಂತ, ಅಧ್ಯಯನಶೀಲ ಹಾಗೂ ಸಾಮಾಜಿಕ ಬದ್ಧತೆ ಹೊಂದಿರುವವರು ಬರಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಬಸವಕಲ್ಯಾಣದ ಸಹಾಯಕ ನಿರ್ದೇಶಕ ದಿಲೀಪಕುಮಾರ್ ಉತ್ತಮ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಾಗಭೂಷಣ ಕೆ. ಸ್ವಾಗತಿಸಿದರು. ನಾಗರೆಡ್ಡಿ ನಿರೂಪಿಸಿದರು. ರಮೇಶ್ ಬಿರಾದಾರ ವಂದಿಸಿದರು. ಕುಮಾರಿ ಪ್ರಗತಿ ಸಭಾಧ್ಯಕ್ಷರಾಗಿ, ಸಂಗಮೇಶ ಮುಖ್ಯಮಂತ್ರಿಯಾಗಿ ಹಾಗೂ ಸುಮೀತ ವಿರೋಧ ಪಕ್ಷದ ನಾಯಕರಾಗಿ ಯುವ ಸಂಸತ್ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪುಷ್ಪಾ ಕೋರೆ, ಎಂ.ಡಿ. ಶಕೀಲ್, ವಸತಿ ನಿಲಯ ಅಧಿಕಾರಿಗಳಾದ ನಿಂಗಣ್ಣಗೌಡ ಪಾಟೀಲ್, ಎಂ.ಡಿ. ಹಫೀಝ್, ಭೀಮಣ್ಣ ಮಾಶೆಟ್ಟಿ, ಉಜ್ವಲಾ ಪಾಟೀಲ್, ತಿಪ್ಪಣ್ಣ ಜಮಾದಾರ್, ಅನುರಾಧಾ ರೆಡ್ಡಿ, ದೇವಿಂದ್ರ ನಾಗಬತ್ತಿ ಹಾಗೂ ಅನಿಲ್ ಚೌಹಾನ್ ಸೇರಿದಂತೆ ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.