ಬೀದರ್ | ಅಕ್ರಮವಾಗಿ ಸಾಗಿಸುತಿದ್ದ 40 ಕ್ವಿಂಟಲ್ ಪಡಿತರ ಅಕ್ಕಿ ವಶ : ಮೂವರ ವಿರುದ್ಧ ಪ್ರಕರಣ ದಾಖಲು
ಬೀದರ್ : ಅಕ್ರಮವಾಗಿ ಸಾಗಿಸುತಿದ್ದ 1 ಲಕ್ಷ 36 ಸಾವಿರ ರೂ. ಮೌಲ್ಯದ 40 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ಅಕ್ಕಿ ಸಾಗಿಸುತಿದ್ದ ಒಂದು ಬುಲೆರೋ ವಾಹನವನ್ನು ಬಸವಕಲ್ಯಾಣ ಪೊಲೀಸರು ವಶಕ್ಕೆ ಪಡೆದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಸವಕಲ್ಯಾಣ ಪಟ್ಟಣದ ಅಡತ್ ಬಜಾರನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ವಾಹನದಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ತಿಳಿದು, ಆಹಾರ ನಿರೀಕ್ಷಕ ನಾಗರಾಜ್ ಪಾಟೀಲ್ ಅವರ ಸಮಕ್ಷಮದಲ್ಲಿ ಪಿಎಸ್ಐ ಚಂದ್ರಶೇಖರ್ ನಾರಾಯಣಪೂರೆ ಮತ್ತು ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು.
ದಾಳಿಯಲ್ಲಿ ಬುಲೆರೋ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಲಕ್ಷ 36 ಸಾವಿರ ರೂ. ಮೌಲ್ಯದ ಸುಮಾರು 40 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ 5 ಲಕ್ಷ ಬೆಲೆ ಬಾಳುವ ಅಕ್ಕಿ ಸಾಗಿಸುತಿದ್ದ ವಾಹನ ವಶಕ್ಕೆ ಪಡೆದು, ವಾಹನ ಚಾಲಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.